ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ದೆಹಲಿಗೆ ಹೋಗಲು ಮುಂದಾಗಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಲಾಬಿ ಮಾಡುವುದಕ್ಕೆ ನೀವು ಯಾರೂ ದೆಹಲಿಗೆ ಬರುವುದೇ ಬೇಡ. ಮೊದಲು ವಿಶ್ವಾಸ ಮತ ಗೆಲ್ಲಿ. ಆ ಮೇಲೆ ದೆಹಲಿಗೆ ಬನ್ನಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಸೋಮವಾರದ ದೆಹಲಿ ಭೇಟಿ ರದ್ದಾಗಿದೆ.
ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಾತ್ರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸಿ ವಾಪಸ್ ಆಗಲಿದ್ದಾರೆ. ಕುಮಾರಸ್ವಾಮಿ ಜೊತೆಗೆ ರಾಜ್ಯಸಭಾ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ದೆಹಲಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
Advertisement
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಕಾರ್ಯಕ್ರಮಕ್ಕೆ ಮೈತ್ರಿ ಮೂಲಕ ಅಧಿಕಾರ ಭಾಗ್ಯ ಕೊಟ್ಟ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಆಹ್ವಾನಿಸಲಿದ್ದಾರೆ.
Advertisement
ಎಚ್.ಡಿ.ಕೆ. ಟೆಂಪಲ್ ರನ್: ಸೋಮವಾರ ದೆಹಲಿಗೂ ತೆರಳುವ ಮುನ್ನ ಕುಮಾರಸ್ವಾಮಿ ಅವರು, ತವರು ಜಿಲ್ಲೆ ಹಾಸನಕ್ಕೆ ಭೇಟಿ ನೀಡಿ, ಹುಟ್ಟೂರಿನ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಹೊಳೆನರಸೀಪುರದ ಶ್ರೀಲಕ್ಷಿನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಹರದನಹಳ್ಳಿ ಶ್ರೀ ಈಶ್ವರ ದೇವಾಲಯ ಮತ್ತು ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದೇವಾಲಯ, ನಂತರ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ಶ್ರೀ ದೇವಿರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 11.15ಕ್ಕೆ ಬೆಂಗಳೂರಿಗೆ ವಾಪಾಸ್ ಆಗುವ ಎಚ್.ಡಿ.ಕೆ, 11.30ಕ್ಕೆ ದೆಹಲಿಗೆ ಪಯಣಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ದೆಹಲಿ ತಲುಪಿ, 3.30ಕ್ಕೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿರುವ ಎಚ್‍ಡಿಕೆ, 4.30ಕ್ಕೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ದೆಹಲಿಯಿಂದ ಹೊರಡುವ ಎಚ್‍ಡಿಕೆ, ರಾತ್ರಿ 8.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
Advertisement