– ಅಂಬಿ ಅಂತ್ಯಕ್ರಿಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು
ಮಂಡ್ಯ: ಕಾಂಗ್ರೆಸ್ ನನಗೆ ಮೋಸ ಮಾಡಿಲ್ಲ. ಮಂಡ್ಯದಲ್ಲಿ ಪಕ್ಷಕ್ಕೆ ಮೋಸವಾಗುತ್ತಿದೆ. ನನ್ನ ಜೊತೆ ಜನರಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ಹಿಂದೆ ಒಂದು ದಿನಾಂಕ ಹೇಳಿದ್ದೆ ಅದರಂತೆಯೇ ನಾನು ಆ ದಿನ ತೀರ್ಮಾನ ಹೇಳುತ್ತೇನೆ. ನನ್ನ ಬಗ್ಗೆ ಮಾತನಾಡದಂತೆ ಸಿಎಂ ಕುಮಾರಸ್ವಾಮಿ ಕಳೆದ ಎರಡು ದಿನಗಳ ಹಿಂದೆ ಪಕ್ಷದ ಕಾರ್ಯಕರ್ತರು, ಶಾಸಕರು, ಸಚಿವರಿಗೆ ಹೇಳಿದ್ದಾರೆ. ಆದರೂ ಯಾಕೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಲೋಕಸಭಾ ಚುನಾವಣೆ ಹತ್ತಿರ ಬಂತು. ಇವತ್ತು ಅಭ್ಯರ್ಥಿ ಘೋಷಿಸಿದ್ದಾರೆ. ಇಂತಹ ಮಾತುಗಳನ್ನು ಯಾಕೆ ಆಡಬೇಕು. ನನ್ನನ್ನು ಸಚಿವರು ಸಂಪರ್ಕಿಸಿಲ್ಲ. ಪುತ್ರ ಅಭಿಷೇಕ್‍ನನ್ನು ಸಂಪರ್ಕಿಸಿದ್ದಾರೆ. ಮೊದಲೇ ಅವರು ನಮ್ಮ ಪಕ್ಷದವರಲ್ಲ ಅಂದರು. ಅಷ್ಟೇ ಅಲ್ಲದೆ ನಾನು ಅಭ್ಯರ್ಥಿಯಾಗುವ ಅವರಿಗೆ ಇಷ್ಟವಿರಲಿಲ್ಲ. ನನಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದಲ್ಲಿ ಮಾತನಾಡಿದ ಸುಮಲತಾ ಅವರು, ಮಾಜಿ ಸಚಿವ, ಪತಿ ಅಂಬರೀಶ್ ಅವರ ಪಾರ್ಥಿವ ಶರೀರ ಮತ್ತು ಅಂತ್ಯಕ್ರಿಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು. ಈ ವಿಚಾರದಲ್ಲಿ ರಾಜಕೀಯ ಬೆರೆಸಿದವರು ಯಾರೇ ಆಗಿದ್ದರೂ ಅದು ತಪ್ಪು ಎಂದು ಸಿಎಂಗೆ ತಿರುಗೇಟು ಕೊಟ್ಟರು.
ಅಂಬರೀಶ್ ಅವರ ಮೃತ ದೇಹವನ್ನು ಮಂಡ್ಯಕ್ಕೆ ತರುವುದು ಬೇಡವೆಂದು ಹೇಳಿದವರೇ ಈಗ ಮಂಡ್ಯದಲ್ಲಿ ಓಡಾಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಈ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಯಾರನ್ನುದ್ದೇಶಿಸಿ ಹಾಗೆ ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ ಎಂದು ತಿಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv