ಕಾಂಗ್ರೆಸ್‌ನ ಗ್ಯಾರಂಟಿಗಳು ದೇಶವನ್ನು ದಿವಾಳಿಗೆ ತಳ್ಳಬಹುದು: ಮೋದಿ ಎಚ್ಚರಿಕೆ

Public TV
1 Min Read
narendra modi 3 1

ಜೈಪುರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಸಂದರ್ಭ ಕಾಂಗ್ರೆಸ್ (Congress) ಹೊಸ ಗ್ಯಾರಂಟಿ ಸೂತ್ರವನ್ನು (Guarantee Formula) ಹೆಣೆದಿದೆ. ಕಾಂಗ್ರೆಸ್‌ನವರ ಈ ಗ್ಯಾರಂಟಿಗಳು ದೇಶವನ್ನು ದಿವಾಳಿಯಾಗಿಸಬಹುದು (Bankrupt) ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ರಾಜಸ್ಥಾನದ (Rajasthan) ಅಜ್ಮೀರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ರಾಜ್ಯ ಚುನಾವಣೆಗಳಿಗಾಗಿ ಗ್ಯಾರಂಟಿ ಸೂತ್ರಗಳನ್ನು ಸೃಷ್ಟಿಸಿದೆ. ಆದರೆ ಅವರು ತಾವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರಾ? ಕಲ್ಯಾಣಕ್ಕಾಗಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಜನರು ಆಶ್ಚರ್ಯಪಡುತ್ತಿದ್ದಾರೆ. ಆದರೆ ಅವರಿಗೆ ಎಂದಿಗೂ ಹಣದ ಸಮಸ್ಯೆಯೇ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

NARENDRA MODI 1

50 ವರ್ಷಗಳ ಹಿಂದೆ ಕಾಂಗ್ರೆಸ್ ದೇಶದಲ್ಲಿ ಬಡತನ ತೊಡೆದುಹಾಕುತ್ತದೆ ಎಂದು ಭರವಸೆ ನೀಡಿತ್ತು. ಆದರೆ ಇದು ಅವರು ಬಡವರಿಗೆ ಬಗೆದಿರುವ ದೊಡ್ಡ ದ್ರೋಹವಾಗಿದೆ. ಬಡವರ ದಾರಿ ತಪ್ಪಿಸುವುದು ಮತ್ತು ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ ರಾಜಸ್ಥಾನದ ಜನರು ಕೂಡಾ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜಸ್ಥಾನಕ್ಕೆ ಏನು ಸಿಕ್ಕಿದೆ? ಶಾಸಕರು, ಸಿಎಂ ಹಾಗೂ ಮಂತ್ರಿಗಳು ತಮ್ಮ ತಮ್ಮಲ್ಲೇ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

2014 ಕ್ಕೂ ಮೊದಲು ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು. ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿದ್ದರೂ ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ನಡೆಸುತ್ತಿತ್ತು. ಕಾಂಗ್ರೆಸ್ ದೇಶದ ರಕ್ತವನ್ನು ಹೀರುವ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಭ್ರಷ್ಟ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.

ಈಗ ದೇಶದಲ್ಲಿ ಬಿಜೆಪಿ ಸರ್ಕಾರದಿಂದಾಗಿ ಜಗತ್ತು ಭಾರತದ ಬಗ್ಗೆ ಮಾತನಾಡುತ್ತಿದೆ. ಕಳೆದ 9 ವರ್ಷಗಳಲ್ಲಿ ತಮ್ಮ ಸರ್ಕಾರ ಜನರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ತೀವ್ರ ಬಡತನವನ್ನು ಕೊನೆಗೊಳಿಸಲು ಭಾರತ ಹತ್ತಿರದಲ್ಲಿದೆ ಎಂದು ನುಡಿದರು. ಇದನ್ನೂ ಓದಿ: ಜೂನ್‌ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?

Share This Article