ಕಲಬುರಗಿ/ ಬೆಂಗಳೂರು: ಪಂಚ ಗ್ಯಾರಂಟಿ (Congress Guarantee) ಜಾರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan Samman Nidhi) ಯೋಜನೆಗೆ ರಾಜ್ಯ ಸರ್ಕಾರ ಕತ್ತರಿ ಹಾಕುತ್ತಾ ಎಂಬ ಪ್ರಶ್ನೆ ಎದ್ದಿದೆ.
ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಮ್ಮ ಸರ್ಕಾರ ನೀಡಿದ 5 ಗ್ಯಾರಂಟಿ ಬಗ್ಗೆ ಮಾತ್ರ ನಾವು ಯೋಚನೆ ಮಾಡುತ್ತಿದ್ದೇವೆ. ಪಿಎಂ ಕಿಸಾನ್ ಯೋಜನೆ ಅದು ನಮ್ಮ ಸರ್ಕಾರದ ಗ್ಯಾರಂಟಿಯಲ್ಲಿ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?
ಈ ಹೇಳಿಕೆಯ ಮೂಲಕ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ರೂಪಾಯಿಗೆ ಬ್ರೇಕ್ ಬೀಳುವ ಬಗ್ಗೆ ಪರೋಕ್ಷ ಸುಳಿವು ಕೊಟ್ಟಿದ್ದಾರೆ. ಯಡಿಯೂರಪ್ಪ ಸರ್ಕಾರ ಹೆಚ್ಚುವರಿಯಾಗಿ 4 ಸಾವಿರ ರೂ. ನೀಡಿದ್ದರಿಂದ ವರ್ಷಕ್ಕೆ ರೈತರ ಖಾತೆ ಒಟ್ಟು 10 ಸಾವಿರ ರೂ. ಜಮೆಯಾಗುತ್ತಿತ್ತು.
ಚುನಾವಣಾ ಪ್ರಚಾರದಲ್ಲಿ ಈ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂದು ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ 40% ಕಮಿಷನ್ ಹಣವನ್ನು ಇದಕ್ಕೆ ವಿನಿಯೋಗಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಹಣ ಹೊಂದಿಸಲು ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ.
ಆಸ್ತಿ ತೆರಿಗೆ ಹೆಚ್ಚಳ, ಪಿಎಂ ಕಿಸಾನ್ ಸಮ್ಮನ್ ಯೋಜನೆಗೆ ಕತ್ತರಿ, ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸೆಸ್, ಮದ್ಯದ ಮೆಲೆ ತೆರಿಗೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ.
5 ಗ್ಯಾರಂಟಿ ಯೋಜನೆಗಳು ಯಾವುದು?
ಗೃಹಜ್ಯೋತಿ : ಎಲ್ಲಾ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್
ಗೃಹಲಕ್ಷ್ಮಿ : ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ.
ಅನ್ನಭಾಗ್ಯ : ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
ಯುವನಿಧಿ : ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ.
ಉಚಿತ ಪ್ರಯಾಣ: ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ