ಹಾಸನ: ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷಗಳಲ್ಲಿ ಮಾತುಕತೆ ಮುಂದುವರಿದಿದ್ದು, ಆದರೆ ಯಾವುದೇ ಅಂತಿಮ ನಿರ್ಧಾರವಾಗದೇ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿ ಎಂದು ಬಿಂಬಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಎಚ್‍ಡಿ ದೇವೇಗೌಡ ಅವರು ಸ್ಪರ್ಧೆ ಮಾಡಿದರೆ ನಮ್ಮ ಬೆಂಬಲ ಇದೆ. ಆದರೆ ಪ್ರಜ್ವಲ್ ಅವರನ್ನು ಈಗಾಲೇ ಅಭ್ಯರ್ಥಿ ಎಂದು ಎಚ್‍ಡಿಡಿ ಹೇಳುತ್ತಿರುವುದು ತಪ್ಪು. ಮೈತ್ರಿ ಮೇರೆಗೆ ರಾಜ್ಯದಲ್ಲಿ ಕ್ಷೇತ್ರಗಳ ಹಂಚಿಕೆ ಆಗಬೇಕಿದೆ. ಆದರೆ ಯಾವುದೇ ಅಂತಿಮ ನಿರ್ಧಾರ ಇಲ್ಲದೇ ಹೇಳಿಕೆ ನೀಡುವುದು ಸರಿಯಲ್ಲ. ಒಂದೊಮ್ಮೆ ಮೈತ್ರಿ ಮುಂದುವರಿದು ದೇವೇಗೌಡರು ಅಭ್ಯರ್ಥಿ ಆದರೆ ನಮ್ಮ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ರಾಜೀನಾಮೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿ ಅವರನ್ನು ರಾಜ್ಯದ ಜನರ ಕೆಲಸ ಮಾಡಿ ಎಂದು ಸಿಎಂ ಮಾಡಿದ್ದೇವೆ. ಕಾಂಗ್ರೆಸ್ ಶಾಸಕರಿಂದ ತೊಂದರೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಬ್ಲಾಕ್ ಮೇಲ್ ಮಾಡುತ್ತಿರುವುದು ಸರಿಯಲ್ಲ ಎಂದರು. ಅಲ್ಲದೇ ಪಕ್ಷದ ನಾಯಕ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಅವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿಯವರು ನಮ್ಮ ಮುಖಂಡರು. ನಮ್ಮ ಮನೆಯವರನ್ನು ಅಥವಾ ಮನೆ ದೇವರನ್ನ ನಾವು ಪ್ರೀತಿ ಮಾಡುತ್ತೇವೆ, ಹೊಗಳುತ್ತೇವೆ. ನಮಗೆ ಇವತ್ತಿಗೂ ಕೂಡ ಸಿದ್ದರಾಮಯ್ಯರ ಆಡಳಿತವೇ ಉತ್ತಮ ಆಡಳಿತ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv