ನವದೆಹಲಿ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatre) ವೇಳೆ ಅಸ್ಸಾಂನಲ್ಲಿ ಉಂಟಾಗಿರುವ ಗದ್ದಲದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಯಾತ್ರೆ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ದಾಳಿಕೋರರಿಗೆ ಪೊಲೀಸ್ ರಕ್ಷಣೆ ಸಿಗುತ್ತದೆ. ಹೀಗಾಗಿ ನೀವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಎಂದು ಪತ್ರದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು (Mallikarjun Kharge) ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಪತ್ರದಲ್ಲೇನಿದೆ..?: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಅಗತ್ಯ ಭದ್ರತೆ ನೀಡುತ್ತಿಲ್ಲ. ಬಿಜೆಪಿ ಕಾರ್ಯಕರ್ತರು (BJP Activist) ಯಾತ್ರೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಅಸ್ಸಾಂ ಪೊಲೀಸರು ದಾಳಿಕೋರರಿಗೆ ರಕ್ಷಣೆ ನೀಡುತ್ತಿದ್ದಾರೆ. ಅಲ್ಲದೆ ಜನವರಿ 21 ರಂದು ಸೋನಿತ್‌ಪುರ ಜಿಲ್ಲೆಯಲ್ಲಿ ನಡೆದ ಯಾತ್ರೆಯ ಮೇಲೆ ದಾಳಿ ನಡೆಸಲಾಯಿತು. ಸ್ಥಳೀಯ ಎಸ್ಪಿಯವರು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ತಂಡದ ಮೇಲೆ ದಾಳಿ ಮಾಡಿದರು. ಅಲ್ಲದೇ ನಮ್ಮ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅವರ ಕಾರಿನ ಮೇಲೆ ದಾಳಿ ಮಾಡಲಾಗಿದೆ ಎಂದು ಎರಡು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.
Advertisement
ಬಿಜೆಪಿ ಕಾರ್ಯಕರ್ತರು ಅಸ್ಸಾಂ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಬೋರಾ ಅವರ ಮೇಲೆಯೂ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಅವರು ಗಾಯಗೊಂಡರು. ಮರುದಿನ ಜನವರಿ 22 ರಂದು ನಾಗಾಂವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ ಬೆಂಗಾವಲು ಪಡೆಯನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆಯೂ ಅಸ್ಸಾಂ ಪೊಲೀಸರು ಬಿಜೆಪಿ ಕಾರ್ಯಕರ್ತರ ರಕ್ಷಣೆಯನ್ನು ಮುಂದುವರಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ
Advertisement
ಭದ್ರತೆ ಒದಗಿಸಿ: ಈ ವಿಚಾರದಲ್ಲಿ ಗೃಹ ಸಚಿವ ಅಮಿತ್ ಶಾ (Amitshah) ಅವರು ಕೂಡಲೇ ಮಧ್ಯ ಪ್ರವೇಶಿಸಿ ಭದ್ರತೆ ಒದಗಿಸಬೇಕು ಎಂದು ಖರ್ಗೆ ಮನವಿ ಮಾಡಿದರು. ನ್ಯಾಯ್ ಯಾತ್ರೆಯಲ್ಲಿ ನಡೆದ ಹಲ್ಲೆ ಮತ್ತು ಗಲಾಟೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ದಾಳಿಕೋರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ, ಕ್ರಮವೂ ಕೈಗೊಂಡಿಲ್ಲ. ನಾವು ಯಾತ್ರೆಯನ್ನು ಮುಂದುವರಿಸುತ್ತಿದ್ದೇವೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನ ಯಾವುದೇ ಸದಸ್ಯರಿಗೆ ನೋವಾಗದಂತೆ ನೀವು (ಅಮಿತ್ ಶಾ) ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಜೊತೆಗೆ ಅಸ್ಸಾಂ ಸಿಎಂ ಹಾಗೂ ಪೊಲೀಸ್ ನಿರ್ದೇಶಕರಾಗಿ ಅಹಿತರ ಘಟನೆ ನಡೆಯದಂತೆ ನೋಡಿಕೊಳ್ಳಲು ನಿರ್ದೇಶನ ನೀಡುವಂತೆ ಕೇಳಿಕೊಂಡಿದ್ದಾರೆ.
ಜನವರಿ 23 ರಂದು ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಗುವಾಹಟಿಗೆ ಹೋಗದಂತೆ ತಡೆಯಲಾಯಿತು. ಆದರೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ ಅನ್ನು ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಸಿಎಂ ಆದೇಶದ ಮೇರೆಗೆ ಅಸ್ಸಾಂ ಪೊಲೀಸರು ಸರ್ಕಾರಿ ಆಸ್ತಿ ಹಾನಿ ಮತ್ತು ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು.