ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲೆಡೆ ಪ್ರಮುಖರ ಸಭೆಗಳನ್ನ ನಡೆಸುತ್ತಿದ್ದೇವೆ. ಜನವರಿ 15 ರೊಳಗೆ ಕನಿಷ್ಠ 150 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಮಾಡಲು ತಿರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwar Khandre) ಹೇಳಿದ್ದಾರೆ.
ರಾಯಚೂರಿನ (Raichuru) ಜಿಲ್ಲಾ ಕಾಂಗ್ರೆಸ್ (Congress) ಸಮಿತಿ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯ ಚುನಾವಣಾ ಸಮಿತಿ ಸಭೆಯ ಮಾರ್ಗಸೂಚಿ ಎಲ್ಲರಿಗೆ ಕೊಡಲಾಗಿದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಿಗೆ ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ. ಎಲ್ಲಾ ಮುಖಂಡರ ಅಭಿಪ್ರಾಯ ಪಡೆದು, ಅಂತಿಮವಾಗಿ ಮೂವರ ಪಟ್ಟಿ ಸಲ್ಲಿಸಲಾಗುವುದು. ಒಂದೊಂದು ಕ್ಷೇತ್ರದಿಂದ ಮೂವರು ಆಕಾಂಕ್ಷಿಗಳ ಹೆಸರನ್ನ ರಾಜ್ಯ ಚುನಾವಣಾ ಸಮಿತಿ ಹಾಗೂ ಎಐಸಿಸಿಗೆ (AICC) ಕಳುಹಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಈಗಿನ ಶಾಸಕರಿಗೆ ಕೋಟಿ ಅಂದ್ರೆ ಕಿಮ್ಮತ್ತಿಲ್ಲ – ಬೊಮ್ಮಾಯಿ
ಮಸ್ಕಿ ಕ್ಷೇತ್ರದಲ್ಲಿ ಮಾತ್ರ ಒಬ್ಬರೇ ಒಬ್ಬ ಅಭ್ಯರ್ಥಿ ಇದ್ದಾರೆ. ಬಸನಗೌಡ ತುರವಿಹಾಳ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಹ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಬಿ ಫಾರಂ ಮಾತ್ರ ಒಬ್ಬರಿಗೆ ಕೊಡಬೇಕಾಗುತ್ತದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಒಪ್ಪಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಹೀಗಾಗಿ ಪಕ್ಷಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ಸಂಘಟನೆ ಮಾಡಿದವರಿಗೆ ಅರ್ಹತೆಗೆ ತಕ್ಕ ಸ್ಥಾನಮಾನ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ
ನಮ್ಮ ಪಕ್ಷದ ಶಿಸ್ತು, ಬದ್ಧತೆ ಒಪ್ಪಿಕೊಂಡರೆ ಬೇರೆ ಪಕ್ಷದಿಂದ ಬಂದವರನ್ನೂ ಸೇರಿಸಿಕೊಳ್ಳಲಾಗುತ್ತೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಬೇರೆ ಪಕ್ಷದಿಂದ ಬರುವವರನ್ನ ಪರಿಶೀಲನೆ ಮಾಡುತ್ತೆ. ಕಾಂಗ್ರೆಸ್ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಬರುವವರನ್ನ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.