ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ (Congress) ಅಭ್ಯರ್ಥಿ ಕನ್ಹಯ್ಯಾ ಕುಮಾರ್ (Kanhaiya Kumar) ಮೇಲೆ ಹಲ್ಲೆ ಮಾಡಲಾಗಿದೆ. ಹೂ ಮಾಲೆ ಹಾಕುವ ನೆಪದಲ್ಲಿ ಬಂದು ದುಷ್ಕರ್ಮಿಗಳು ಸುತ್ತುವರಿದು ಕಪ್ಪು ಮಸಿ ಎರಚುವುದಲ್ಲದೇ ಕಪಾಳಕ್ಕೆ ಹೊಡೆದಿದ್ದಾರೆ ಎಂದು ವರದಿಯಾಗಿದೆ.
ಕರ್ತಾರ್ ನಗರದ (Kartar Nagar) ಎಎಪಿ ಕಚೇರಿ ಬಳಿ ಘಟನೆ ನಡೆದಿದೆ ಎನ್ನಲಾಗಿದ್ದು, ಆಪ್ ಕಚೇರಿಯಿಂದ ಕನ್ಹಯ್ಯಾ ಅವರಿಗೆ ಬೀಳ್ಕೊಡಲು ಬಂದಾಗ ಮಸಿ ಎರಚಲಾಗಿದೆ. ದುಷ್ಕರ್ಮಿಗಳಿಂದ ಕನ್ಹಯ್ಯಾ ಅವರನ್ನು ರಕ್ಷಿಸಲು ಮಧ್ಯಪ್ರವೇಶ ಮಾಡಿದ ಎಎಪಿ ಮಹಿಳಾ ಕೌನ್ಸಿಲರ್ ಛಾಯಾ ಗೌರವ್ ಶರ್ಮಾ ಅವರೊಂದಿಗೂ ದುಷ್ಕರ್ಮಿಗಳು ಅನುಚಿತ ವರ್ತನೆ ಮಾಡಿದ್ದಾರೆ. ಇದನ್ನೂ ಓದಿ: ಮನೆಯಲ್ಲೇ ಮತದಾನ ಮಾಡಿದ ಅನ್ಸಾರಿ, ಮನಮೋಹನ್ ಸಿಂಗ್, ಜೋಶಿ
ಈ ಬಗ್ಗೆ ದೂರು ದಾಖಲಿಸಿರುವ ಛಾಯಾ ಗೌರವ್ ಶರ್ಮಾ, ತಮ್ಮ ಪತಿಯನ್ನು ಪಕ್ಕಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದಾರೆ. ಜನರ ಮೇಲೆ ಕಪ್ಪು ಮಸಿ ಎಸೆದಿದ್ದು, ಘಟನೆಯಲ್ಲಿ 3-4 ಮಹಿಳೆಯರು ಸೇರಿ ಕೆಲವರು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ – ಕೇಜ್ರಿವಾಲ್ ಆಪ್ತ ಸಹಾಯಕ ಅರೆಸ್ಟ್
ಈ ನಡುವೆ ದಾಳಿಕೋರರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ದುಷ್ಕರ್ಮಿಗಳ ಪೈಕಿ ಇಬ್ಬರು ವ್ಯಕ್ತಿಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಕನ್ಹಯ್ಯಾ ಕುಮಾರ್ ಅವರು ದೇಶವನ್ನು ವಿಭಜಿಸುವ ಬಗ್ಗೆ, ಭಾರತೀಯ ಸೇನೆಯ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಇಂದು ನಾವು ಚಿಕಿತ್ಸೆ ನೀಡಿದ್ದೇವೆ ಎಂದು ದುಷ್ಕರ್ಮಿಗಳು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!