ಉಡುಪಿ: ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾರ್ಕಳ ವಿಧಾನಸಭಾ ಕಾಂಗ್ರೆಸ್‍ನ ಒಳ ಜಗಳ ವಿಪರೀತಕ್ಕೇರಿದೆ. ವೀರಪ್ಪ ಮೊಯ್ಲಿ ಬಣ ಮತ್ತು ಟಿಕೆಟ್ ಆಕಾಂಕ್ಷಿ ಮುನಿಯಾಲು ಉದಯಕುಮಾರ್ ಶೆಟ್ಟಿ ಬಣದ ಕಿತ್ತಾಟ ಜೋರಾಗಿದೆ. ಇದರ ನಡುವೆ ವೀರಪ್ಪ ಮೊಯ್ಲಿ ಮತ್ತು ಅಭ್ಯರ್ಥಿ ಗೋಪಾಲ ಪೂಜಾರಿಯವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ಘಟನೆ ನಡೆದಿದೆ.
ವೀರಪ್ಪ ಮೊಯ್ಲಿಯವರ ಜನನ ದಿನಾಂಕ ಮತ್ತು ಟಿಕೆಟ್ ಘೋಷಣೆಯಾದ ಏಪ್ರಿಲ್ 15ರ ದಿನಾಂಕವನ್ನು ನಮೂದಿಸಿ ಮೊಯ್ಲಿ ಮರಣ ಹೊಂದಿದ್ದಾರೆ ಎಂದು ಬರೆಯಲಾಗಿದೆ. ಕೆಲ ಕಿಡಿಗೇಡಿಗಳು ಫೋಟೋಗಳನ್ನು ವಾಟ್ಸಪ್, ಫೇಸ್ ಬುಕ್‍ನಲ್ಲೂ ಹರಿಬಿಡುತ್ತಿದ್ದಾರೆ. ಈ ನಡುವೆ ಮುನಿಯಾಲು ಉದಯಕುಮಾರ್ ಶೆಟ್ಟಿ ಬೆಂಬಲಿಗರು ಗೋಪಾಲ ಭಂಡಾರಿಯವರ ಮನೆಗೆ ತೆರಳಿ ಕಣದಿಂದ ಹಿಂದೆ ಸರಿಯುವಂತೆ ಒತ್ತಾಯ ಮಾಡಿದ್ದಾರೆ.
ತಾವು ಬಿ ಫಾರಂ ಹಿಂದಕ್ಕೆ ನೀಡಿ, ಸ್ಪರ್ಧೆಯಿಂದ ಹಿಂದೆ ಸರಿಯದಿದ್ದರೆ ಬೂತ್ ನಲ್ಲಿ ಕಾರ್ಯಕರ್ತರು ಪ್ರಚಾರಕ್ಕೆ ಸಿಗದಂತೆ ಮಾಡುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಮನೆಗೆ ತೆರಳಿ ಬಹಳ ಒತ್ತಡ ಹೇರಿದ್ದಾರೆ ಎಂದು ಗೋಪಾಲ ಭಂಡಾರಿ ಬೆಂಬಲಿಗರು ದೂರಿದ್ದಾರೆ. ಈ ಎರಡು ವಿಚಾರಗಳನ್ನು ಕಂಡು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ಕಣ್ಣೀರಿಟ್ಟಿದ್ದಾರೆ. ಕಳೆದ 40 ವರ್ಷದ ರಾಜಕಾರಣದಲ್ಲಿ, 10 ವರ್ಷದ ಶಾಸಕತ್ವದಲ್ಲಿ ನಯಾ ಪೈಸೆ ಲಂಚದ ಹಣ ಪಡೆದಿಲ್ಲ. ಒಂದು ರೂಪಾಯಿಯನ್ನು ಯಾರಿಂದಲೂ ಪಡೆದಿಲ್ಲ. ನನಗೆ, ನಮ್ಮೆಲ್ಲರ ಮುಖಂಡ ವೀರಪ್ಪ ಮೊಯ್ಲಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅಪಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಕುಟುಂಬಕ್ಕೆ, ಮಕ್ಕಳಿಗೆ- ಹೆಂಡತಿಗೆ ಹೀನಾಯವಾಗಿ ಬೈಯ್ಯಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರಿಟ್ಟಿದ್ದಾರೆ. ಪ್ರಚಾರದ ವೇಳೆ ಬೂತ್ ಸಭೆಯಲ್ಲಿ ಮಾತನಾಡಿದ ಗೋಪಾಲ ಭಂಡಾರಿಯವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಧಮ್ಕಿಗೆಲ್ಲ ನಾನು ಹೆದರೋದಿಲ್ಲ, ಭ್ರಷ್ಟಾಚಾರದಿಂದ ಮಾಡಿದ ಹಣ ನನ್ನಲ್ಲಿಲ್ಲ. ಸಾಲದಲ್ಲಿರುವ ನಾನು ಜನಸೇವೆ ಮಾಡುತ್ತೇನೆ ಎಂದು ಗೋಪಾಲ ಭಂಡಾರಿ ಹೇಳಿದ್ದಾರೆ. ಸದ್ಯ ಈ ವಿಚಾರ ಭಾರೀ ಚರ್ಚೆಯಲ್ಲಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಉದಯಕುಮಾರ್ ಶೆಟ್ಟಿ, ನನ್ನ ಬೆಂಬಲಿಗರು ಪರಿಸ್ಥಿತಿಯನ್ನು ಮನವರಿಗೆ ಮಾಡಿದ್ದಾರೆ. ನನಗೆ ಅವಕಾಶ ಮಾಡಿಕೊಡಿ ಎಂದು ಮನವರಿಗೆ ಮಾಡಿದ್ದಾರೆ. ಧಮ್ಕಿ ಹಾಕುವ ಕೆಲಸ ಮಾಡಿಲ್ಲ ಎಂದಿದ್ದಾರೆ.