ಹಾಸನ: ಸ್ಪೀಕರ್ ಕೋಳಿವಾಡ ಆಯ್ತು, ಇದೀಗ ಹೊಳೆನರಸೀಪುರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಸಿದ್ದರಾಮಯ್ಯ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸೋಲಿಗೆ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡದಿರುವುದೇ ಕಾರಣ. ಅವರ ಮೇಲೆ ಯಾವ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ನಾನು ಹರಕೆಯೆ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಅಂತ ತಮ್ಮ ಪರ ಪ್ರಚಾರಕ್ಕೆ ಬಾರದ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ರು.
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದ ರಚನೆ ವಿಚಾರದ ಕುರಿತು ಮಾತನಾಡಿದ ಅವರು, ಹಾಗಾದರೆ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾಧಿಯಾಗಲಿದೆ. ಕೈ-ದಳ ದೋಸ್ತಿ ಆದ್ರೆ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರ ಕಗ್ಗೊಲೆಯಾಗಲಿದೆ ಅಂತ ಸಮ್ಮಿಶ್ರ ಸರಕಾರ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು.
ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ ಅವರೇ ಹೆಚ್ ಡಿಕೆ ಅವರನ್ನು ಸಿಎಂ ಮಾಡಲು ಹೊರಟಿಲ್ಲವೇ? ಭಾವನಾತ್ಮಕ ವಿಷಯದಲ್ಲಿ ರೇವಣ್ಣ ಅವರಿಗೆ ಗೆಲುವಾಗಿದೆ. 270 ಗ್ರಾಮಗಳಲ್ಲಿ ದೇವಾಲಯ ಅಪೂರ್ಣವಾಗಿರುವುದರಿಂದ ಜನ ಅವರಿಗೆ ವೋಟ್ ಹಾಕಿದ್ದಾರೆ ಅಂತ ಹೇಳಿದ್ರು.