ಸಮ್ಮಿಶ್ರ ಸರ್ಕಾರ ಸೇಫ್ಟಿಗೆ ನಾಯಕರ ಮುಂದಿದೆ ಎರಡು ಮಹತ್ವದ ಮೆಟ್ಟಿಲು!

Public TV
3 Min Read
JDS COngress 2

– ಸಕ್ಸಸ್ ಆದ್ರೆ, ಮೈತ್ರಿಯನ್ನ ಟಚ್ ಮಾಡೋಕೆ ಆಗಲ್ಲವಂತೆ!

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮುಂದೆ ಎರಡು ಮಹತ್ವದ ಮೆಟ್ಟಿಲುಗಳಿದ್ದು, ಒಂದು ವೇಳೆ ಈ ಮೆಟ್ಟಿಲು ಏರಿದ್ದಲ್ಲಿ ಮೈತ್ರಿಯನ್ನು ಯಾರಿಂದಲೂ ಟಚ್ ಮಾಡೋದಕ್ಕೆ ಸಾಧ್ಯವಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಹೌದು, ರಾಜ್ಯದಲ್ಲೂ ಉಪಚುನಾವಣೆ ಎದುರಾಗಿದ್ದು, ಮೂರು ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಮೈತ್ರಿ ಸರ್ಕಾರದ ರಚನೆಯ ಬಳಿಕ ಪ್ರತಿನಿತ್ಯ ‘ಆಪರೇಷನ್ ಕಮಲ’ಕ್ಕೆ ಯಾರು ಒಳಗಾಗುತ್ತಾರೋ ಎಂಬ ಪ್ರಶ್ನೆಯೊಂದು ಜೆಡಿಎಸ್ ಮತ್ತು ಕಾಂಗ್ರೆಸ್ ವರಿಷ್ಠರಲ್ಲಿ ಹುಟ್ಟಿಕೊಂಡಿರುವುದು ನಿಜ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಪೂರ್ವ ಮೈತ್ರಿಯನ್ನು ಮಾಡಿಕೊಂಡಿದ್ದು, ಕ್ಷೇತ್ರಗಳನ್ನು ಸಹ ಹಂಚಿಕೊಂಡಿವೆ. ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರ, ರಾಮನಗರದ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಾಲಾದ್ರೆ, ಜಮಖಂಡಿ ಹಾಗು ಬಳ್ಳಾರಿ ಕಾಂಗ್ರೆಸ್ ಪಡೆದುಕೊಂಡಿದೆ. ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜನ ಮೈತ್ರಿ ಪರವಾಗಿ ಇದ್ದಾರೆ ಎಂಬುದನ್ನು ತೋರಿಸಲು ನಾಯಕರು ಕಸರತ್ತು ಆರಂಭಿಸಿದ್ದಾರೆ.

JDS COngress 4

ಇತ್ತ ಬಿಜೆಪಿ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಲ್ಲಿ ಗೆಲುವು ಸಾಧಿಸುವ ಮೂಲಕ ಜನ ಮೈತ್ರಿ ವಿರುದ್ಧ ಇದ್ದಾರೆ. ಇದು 2019ರ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದು ಸಾಬೀತು ಮಾಡಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಣತಂತ್ರ ರೂಪಿಸಲಾಗುತ್ತಿದೆ. ಸದ್ಯ ಸರ್ಕಾರದ ಮುಂದೆ ಎರಡು ಮಹತ್ವದ ಮೆಟ್ಟಿಲುಗಳಿದ್ದು, ಒಂದು ವೇಳೆ ಎರಡು ಮೆಟ್ಟಿಲುಗಳಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಯಶಸ್ವಿಯಾಗಿ ಏರಿದಲ್ಲಿ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರವನ್ನು ಯಾರಿಂದಲೂ ಟಚ್ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ವಿಶ್ಲೇಷಣೆ ಕೇಳಿಬಂದಿದೆ.

ಮೊದಲ ಮೆಟ್ಟಿಲು ಏನು?
ಯಡಿಯೂರಪ್ಪರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಜೆಡಿಎಸ್ ಗೆಲುವು ಸಾಧಿಸಿದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಲಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಒಂದು ವೇಳೆ ಬಿ.ವೈ.ರಾಘವೇಂದ್ರ ಸೋಲನ್ನಪ್ಪಿದ್ದಲ್ಲಿ, ಮಗನನ್ನೆ ಗೆಲ್ಲಿಸಿಕೊಳ್ಳಲಾಗದ ಬಿಎಸ್‍ವೈ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಾರೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿ ತಿರುಗೇಟು ನೀಡಲು ಮೈತ್ರಿ ನಾಯಕರು ಚಿಂತನೆ ನಡೆಸಿದ್ದಾರೆ.

BY Raghavendra 2

ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಾಕಷ್ಟು ಚುನಾವಣಾ ತಂತ್ರಗಳನ್ನು ಬೈ ಎಲೆಕ್ಷನ್ ನಲ್ಲಿ ಪ್ರಯೋಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಬಂಗಾರಪ್ಪ ಕುಟುಂಬಸ್ಥರಾದ ಪುತ್ರ ಮಧು ಬಂಗಾರಪ್ಪ ಅಥವಾ ಪುತ್ರಿ ಗೀತಾ ಶಿವರಾಜ್‍ಕುಮಾರ್ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿ ಜೆಡಿಎಸ್ ಇದೆ. ಆದ್ರೆ ಇಬ್ಬರು ಚುನಾವಣೆಗೆ ಸ್ಫರ್ಧಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇಷ್ಟು ಬೇಗ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಬೇಡ, ಸಮ್ಮಿಶ್ರ ಸರ್ಕಾರದಲ್ಲಿ ಬೇರೆ ಅಧಿಕಾರ ಪಡಯುವ ಕುರಿತು ಮಧು ಬಂಗಾರಪ್ಪ ಚಿಂತಿಸುತ್ತಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಇತ್ತ ಈ ಬಾರಿ ನಮಗೆ ಚುನಾವಣೆವೇ ಬೇಡ, ಬೇಕಾದ್ರೆ ಬಂದು ಪ್ರಚಾರ ಮಾಡುತ್ತೇವೆ ಎಂದು ಶಿವರಾಜ್‍ಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡನೇ ಮೆಟ್ಟಿಲು ಏನು?
ಶಾಸಕ ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರುವಾಗಿರುವ ಬಿಜೆಪಿ ಭದ್ರಕೋಟೆ ಬಳ್ಳಾರಿ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 6 ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗಿ ಬಂದಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಬಳಿಕ ಆಪರೇಷನ್ ಕಮಲ ಶ್ರೀರಾಮುಲು ಮುಂದಾಳತ್ವದಲ್ಲಿಯೇ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಇತ್ತ ಕಾಂಗ್ರೆಸ್ ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ಬಳ್ಳಾರಿಯ ಉಸ್ತುವಾರಿ ಸಚಿವರು. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪ್ರತಿಷ್ಠೆಯ ಕಣವಾಗಿ ಬಳ್ಳಾರಿ ಉಪಚುನಾವಣೆ ಏರ್ಪಟ್ಟಿದೆ. ಬಳ್ಳಾರಿಯಲ್ಲಿ ಗೆಲುವು ಸಾಧಿಸುವ ಮೂಲಕ ಆಪರೇಷನ್ ಕಮಲಕ್ಕೆ ಮುಂದಾದವರಿಗೆ ಶಾಕ್ ಕೊಡಲು ಡಿಕೆ ಶಿವಕುಮಾರ್ ಪ್ಲಾನ್ ಮಾಡುತ್ತಿದ್ದಾರೆ.

Sri Ramulu HDK

ಬಿಜೆಪಿಯಿಂದ ಶ್ರೀರಾಮುಲು ಸಹೋದರಿ ಜೆ.ಶಾಂತಾ ಸ್ಪರ್ಧಿಸೋದು ಖಚಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಇದೂವರೆಗೂ ಅಂತಿಮವಾಗಿಲ್ಲ. ಬಳ್ಳಾರಿ ಚುನಾವಣೆಯಿಂದ ಜೆಡಿಎಸ್ ದೂರ ಉಳಿದಿದ್ದು, ಕಾಂಗ್ರೆಸ್‍ಗೆ ಸುಲಭ ಜಯ ಸಿಗುತ್ತೆ ಎಂಬುವುದು ಕೈ ನಾಯಕರ ಲೆಕ್ಕಾಚಾರ. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶ್ರೀರಾಮುಲುಗೆ ಮುಖಭಂಗ ಮಾಡಬೇಕು. ಕೈ ಅಭ್ಯರ್ಥಿ ಜಯಗಳಿಸಿದರೆ ಶ್ರೀರಾಮುಲು ಸಹ ಸಮ್ಮಿಶ್ರ ಸರ್ಕಾರದ ಬಗ್ಗೆ ಮತಾನಾಡಲಾರರು ಎನ್ನುವ ಅಭಿಪ್ರಾಯಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಕೈ ಹಾಗೂ ತೆನೆ ನಾಯಕರ ಪ್ಲಾನ್ ವರ್ಕ್ ಔಟ್ ಆಗುತ್ತಾ? ಕೈ ಹಾಗೂ ತೆನೆ ನಾಯಕರಿಗೆ ಮುಖಭಂಗವಾಗಿ ಆಪರೇಷನ್ ಭೀತಿ ಮತ್ತಷ್ಟು ಹೆಚ್ಚುತ್ತಾ? ಎಲ್ಲದಕ್ಕೂ ಉಪ ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ. ನವೆಂಬರ್ 3ರಂದು ಜಮಖಂಡಿ, ರಾಮನಗರ ವಿಧಾನಸಭೆ ಮತ್ತು ಶಿವಮೊಗ್ಗ, ಮಂಡ್ಯ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 6ರಂದು ಫಲಿತಾಂಶ ಹೊರ ಬರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

DKSHI

Share This Article
Leave a Comment

Leave a Reply

Your email address will not be published. Required fields are marked *