– ಕೆಲವೇ ದಿನಗಳಲ್ಲಿ ಸರ್ಕಾರ ಬೀಳುವುದು ನಿಶ್ಚಿತ
ಬೆಂಗಳೂರು: ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿರುವುದು ಉಳಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಟ್ಟು ಹೋಗುವುದನ್ನು ತಡೆಯಲು ಮಾಡಿರುವ ವ್ಯವಸ್ಥಿತ ಪಿತೂರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದು ಉಳಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಹೋಗುವುದನ್ನು ತಡೆಯಲು ಸಿಎಂ ಮಾಡಿರುವ ವ್ಯವಸ್ಥಿತ ರಾಜಕೀಯ ಪಿತೂರಿ ಎಂದು ಕಿಡಿ ಕಾರಿದ್ದಾರೆ.
Advertisement
Advertisement
ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಬಹುಮತ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವೇ ಇಲ್ಲ. ವಾತವರಣ ನಮಗೆ ಅನುಕೂಲಕರವಾಗಿದೆ. ಆದರೂ ವಿಶ್ವಾಸಮತ ಯಾಚಿಸುವ ಧೈರ್ಯ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರ ಕೆಲವೇ ದಿನಗಳಲ್ಲಿ ಬೀಳೋದು ನಿಶ್ಚಿತ ಎಂದು ಹೇಳಿದರು. ಇಂದು ರೆಸಾರ್ಟ್‍ಗೆ ತೆರಳಿ ನಮ್ಮ ಶಾಸಕರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
Advertisement
Advertisement
ಶುಕ್ರವಾರ ಸದನದಲ್ಲಿ ಸಿಎಂ ಮಾತನಾಡಿ, ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತ ಮಂಡನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದಿದ್ದರು. ಸದನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಸಿಎಂ ಮಾತನ್ನು ಕೇಳಿದ ತಕ್ಷಣ ಕಲಾಪದ ಮಧ್ಯೆ ತಮ್ಮ ಕೊಠಡಿಗೆ ಎದ್ದು ಹೋದ ಬಿಎಸ್‍ವೈ ಕೆಲ ಬಿಜೆಪಿ ಶಾಸಕರೊಂದಿಗೆ ಚರ್ಚೆ ಮಾಡಿದ್ದರು.