ಧಾರವಾಡ: ಕಳೆದುಕೊಂಡ ಹಣವನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಟ್ಟಿದ್ದರೂ ನಿರ್ವಾಹಕ ಓರ್ವನನ್ನು ಅಮಾನತು ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಜುಲೈ 23ರಂದು ಗೋವಾದ ಪಣಜಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಧಾರವಾಡ ಡಿಪೋ ಬಸ್ ನಿರ್ವಾಹಕ ಹರೀಶ್ ಪಟ್ನಾಯಕ್, ಧಾರವಾಡ ಜಿಲ್ಲೆಯ ಅಳ್ವಾವರ್ ಬಸ್ ನಿಲ್ದಾಣದಲ್ಲಿ 8 ಸಾವಿರ ರೂ. ಕಳೆದುಕೊಂಡಿದ್ದರು. ಆ ದಿನ ಬಸ್ ನಿಲ್ಲಿಸಿ ಅದೇ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲು ಮುಂದಾಗಿದ್ದರು.
ಆಗ ಪ್ರಯಾಣಿಕರು ತಡವಾಗುತ್ತಿದ್ದ ಕಾರಣ ಹರೀಶ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ನಿರ್ವಾಹಕ ಹರೀಶ್ ಠಾಣೆಯಲ್ಲಿ ದೂರನ್ನು ದಾಖಲಿಸದೇ ತಮ್ಮ ಮೇಲಾಧಿಕಾರಿಗಳಿಗೆ ಇದರ ಮಾಹಿತಿ ಕೂಡಾ ನೀಡಿದ್ದರು. ಆದರೆ ಅಳ್ನಾವರದಿಂದ ಮುಂದೆ ಬಂದಿದ್ದ ಬಸ್‍ಗೆ ಮುಗದ ಗ್ರಾಮದ ಬಳಿ ಟಿಕೆಟ್ ಚೆಕ್ ಮಾಡಲು ಬಂದ ಅಧಿಕಾರಿ ಹಣ ಕಡಿಮೆ ಇದ್ದ ಕಾರಣ ಮೆಮೋ ನೀಡಿದ್ದರು.
ಈ ಆಧಾರದ ಮೇಲೆ ಡಿಸಿಯವರು ನಿರ್ವಾಹಕನಿಗೆ ಅಮಾನತು ಮಾಡಿದ್ದಾರೆ. ಕಳೆದುಕೊಂಡ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ನೀಡಿದ್ದಾರೆ. ಆ ಹಣವನ್ನು ಹರೀಶ್ ಸಂಸ್ಥೆಗೆ ತುಂಬಿದ್ದರೂ ಅಧಿಕಾರಿಗಳು ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲದೇ ಕಾರ್ಮಿಕ ಮುಖಂಡರಾಗಿರುವ ಇವರಿಗೆ ಬೇಕೆಂದೇ ಈ ರೀತಿ ಅಮಾನತು ಮಾಡಲಾಗಿದೆ ಎಂದು ಹರೀಶ್ ಆರೋಪ ಮಾಡಿದ್ದಾರೆ.