– ಜಾತಿಗಣತಿ: ಬಿಜೆಪಿಯವರ ಆರೋಪಗಳ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಎಂದ ಗೃಹ ಸಚಿವ
ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ (Om Prakash) ಹತ್ಯೆ ಪ್ರಕರಣದ ಸಮಗ್ರ ತನಿಖೆ ಆಗುವವರೆಗೂ ಯಾವುದನ್ನೂ ಹೇಳಲು ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಏನೆಲ್ಲ ಮಾಹಿತಿ ಸಿಗುತ್ತದೆ ಎಂಬುದನ್ನು ನೋಡಬೇಕಿದೆ. 2025 ರಲ್ಲಿ ನಾನು ಗೃಹ ಸಚಿವನಾಗಿದ್ದ ವೇಳೆ ಓಂ ಪ್ರಕಾಶ್ ಅವರು ಡಿಜಿಪಿಯಾಗಿ ಕೆಲಸ ಮಾಡಿದ್ದರು. ಒಳ್ಳೆಯ ಅಧಿಕಾರಿ, ಒಳ್ಳೆಯ ವ್ಯಕ್ತಿ. ಈ ರೀತಿಯಾಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ!
ಪ್ರಕರಣದ ತನಿಖೆಯಾಗುವವರೆಗೂ ಘಟನೆಗೆ ಇದೇ ಕಾರಣ ಎಂದು ಹೇಳಲು ಆಗುವುದಿಲ್ಲ. ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಕೌಟುಂಬಿಕ ಕಾರಣದ ಬಗ್ಗೆ ಹಿಂದೆ ದೂರು ಕೊಟ್ಟಿರುವುದನ್ನು ತನಿಖೆಯಲ್ಲಿ ಪರಿಶೀಲಿಸುತ್ತಾರೆ ಎಂದರು.
ಎಲ್ಲವನ್ನು ಸಮಗ್ರವಾಗಿ ತನಿಖೆ ಮಾಡುವವರೆಗೂ ಯಾವುದನ್ನು ಹೇಳಲು ಆಗುವುದಿಲ್ಲ. ಓಂ ಪ್ರಕಾಶ್ ಅವರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪತ್ನಿಗೆ ಕಾಯಿಲೆ ಇತ್ತು ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ದಾಳಿಗೆ ಯಾವ ಶಸ್ತ್ರವನ್ನು ಬಳಸಿದ್ದರು? ಅದಕ್ಕೆ ಏನಾದರು ಕುರುಹು ಸಿಗುತ್ತದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಗಂಭೀರವಾಗಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಾತಿಗಣತಿ ವರದಿ ಮೂಲಪ್ರತಿ ನಾಪತ್ತೆ ಬಗ್ಗೆ ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಎಲ್ಲ ವಿಷಯದಲ್ಲಿ ಆರೋಪಗಳನ್ನು ಮಾಡುತ್ತಾರೆ. ಸರ್ಕಾರದ ಬಗ್ಗೆ ಸಕಾರಾತ್ಮಕ ಟೀಕೆಗಳನ್ನು ಮಾಡುವಂತೆ ಹೇಳುತ್ತೇವೆ. ಆದರೆ, ಅನವಶ್ಯಕ ಆರೋಪಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ. ಮೂಲ ಪ್ರತಿ ಇಲ್ಲದೇ ವರದಿ ಸಿದ್ಧಪಡಿಸಲು ಹೇಗೆ ಸಾಧ್ಯ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುವಾಗ ವಿಪಕ್ಷದವರ ಆರೋಪಗಳನ್ನು ಗಮನಿಸುತ್ತೇವೆ. ಗಂಭೀರವಾದ ಆರೋಪಗಳಾಗಿರುವುದರಿಂದ ನಾವು ಚರ್ಚೆ ಮಾಡುತ್ತೇವೆ ಎಂದರು.
ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈವರೆಗೆ ಹತ್ತು ಸಮಿತಿಗಳಾಗಿವೆ. ಕೆಲವು ಸಮಿತಿಗಳು ಸಮೀಕ್ಷೆ ಮಾಡಿವೆ. ಕೆಲವು ಸ್ಯಾಂಪಲ್ ಡೇಟಾ ಸಂಗ್ರಹಿಸಿ ವರದಿ ಮಾಡಿದ್ದಾರೆ. ಇದೇ ಮೊದಲನೇ ಬಾರಿಗೆ ಸಂಪೂರ್ಣ ಡೇಟಾ ಸಂಗ್ರಹಿಸಿ ವರದಿ ನೀಡಿದ್ದಾರೆ. ಇದಕ್ಕೆ ಹೆಚ್ಚು ಮಹತ್ವ ಬರುತ್ತದೆಯೇ ವಿನಃ, ಬೇರೆ ಯಾವುದಕ್ಕೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್ ಪತ್ನಿ ಅರೆಸ್ಟ್
ನಾವು ಮೂಲವಾಗಿ ನೋಡಬೇಕಿರುವುದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ವರದಿ ಕೊಡಬೇಕು ಎನ್ನುವುದು. ಆ ದೃಷ್ಟಿನಲ್ಲಿ ಸ್ವಾಭಾವಿಕವಾಗಿ ಜನಗಣತಿಯು ಆಗಬೇಕಾಗುತ್ತದೆ. ಸಮುದಾಯಗಳು ಹಿಂದುಳಿದಿದ್ದಾವೆಯೇ ಅಥವಾ ಮುಂದುವರಿದಿವೆಯೇ ಎಂಬುದನ್ನು ಅಧ್ಯಯನ ಮಾಡಿ ಹೇಳಬೇಕಾದರೆ, ಆ ಜಾತಿಯ ಸಂಖ್ಯೆಗಳನ್ನು ನೋಡಬೇಕಾಗುತ್ತದೆ. ಆ ಆಧಾರದ ಮೇಲೆ ವಿಶ್ಲೇಷಣೆಗಳಾಗುತ್ತಿವೆ. ಕೆಲವರು ಸರಿ ಇದೆ ಎನ್ನುತ್ತಾರೆ. ಕೆಲವರು ಸರಿ ಇಲ್ಲ ಎನ್ನುತ್ತಾರೆ. ಚರ್ಚೆ, ವಿಶ್ಲೇಷಣೆ, ತಪ್ಪು-ಒಪ್ಪುಗಳನ್ನು ಅಧ್ಯಯನ ಮಾಡಿ ಆನಂತರ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಕ್ಯಾಬಿನೆಟ್‌ಗೆ ತಂದು ಚರ್ಚೆಯಾಗಿದೆ. ಸಂಪೂರ್ಣವಾಗಿ ಚರ್ಚೆಯಾಗಿಲ್ಲ ಎಂಬ ಕಾರಣದಿಂದ ಮುಂದಕ್ಕೆ ಹಾಕಲಾಗಿದೆ. ಮುಂದೆ ಮತ್ತೊಂದು ದಿನ ಚರ್ಚೆ ಮಾಡುತ್ತೇವೆ. ಬಹಳಷ್ಟು ಮಂತ್ರಿಗಳು ತಮ್ಮ ಸಮುದಾಯಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ಗಮನದಲ್ಲಿಟ್ಟು ಸರ್ಕಾರ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.