ಉಡುಪಿ: ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಅಫಿಡವಿಟ್(ಪ್ರಮಾಣ ಪತ್ರ) ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಮಧ್ವರಾಜ್ ನಾಮಪತ್ರ ಸಲ್ಲಿಕೆ ದಿನ ತಮ್ಮ ಎಲ್ಲಾ ಆಸ್ತಿ ವಿವರವನ್ನು ಸಲ್ಲಿಸಿಲ್ಲ ಅಂತ ಪ್ರಜಾಪ್ರಭುತ್ವ ದೃಢತಾ ವೇದಿಕೆ ಮೂಲಕ ಕೆ. ಸತೀಶ್ ಎಂಬವರು ಉಡುಪಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರದ ತಾಲೂಕು ಸಮೀಪದ ಉಪ್ಪೂರಿನ ಮೂರು ಆಸ್ತಿಯ ಬಗ್ಗೆ ಪ್ರಮೋದ್ ಮಧ್ವರಾಜ್ ಅಫಿಡವಿಟ್‍ನಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿ ದೂರು ದಾಖಲಾಗಿದೆ. ಸಿಇಒ ಕಚೇರಿಯಿಂದ ದೂರಿನ ಪ್ರತಿ ಉಡುಪಿ ಜಿಲ್ಲಾಧಿಕಾರಿಗೆ ರವಾನೆಯಾಗಿದ್ದು, ಸರಿಯಾದ ಪರಿಶೀಲನೆ ನಡೆಸಿ ವರದಿಯನ್ನು ಸಿಇಒ ಕಚೇರಿಗೆ ಸಲ್ಲಿಸುತ್ತೇವೆ. ನಿಯಮಾನುಸಾರ ನಾವು ತನಿಖೆ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.
ದೂರಿನಲ್ಲಿರುವ ಅಂಶದ ಬಗ್ಗೆ ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಸುತ್ತೇವೆ. ವರದಿಯಲ್ಲಿ ಉಲ್ಲೇಖವಾಗಿರುವ ವಿಷಯದ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.