ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ನಿಷೇಧ ಸಂಬಂಧ ಹೈಕೋರ್ಟ್ ಆದೇಶದ ಬಳಿಕ ಆರ್‌ಟಿಒ ಬೈಕ್ ಟ್ಯಾಕ್ಸಿ ವಿರುದ್ಧ ಸಮರ ಸಾರಿದೆ. ಆದರೆ ಬೈಕ್ ಟ್ಯಾಕ್ಸಿ ನಿಷೇಧ ವಿಚಾರವಾಗಿ ಪರ ವಿರೋಧ ಚರ್ಚೆಗಳು ಜೋರಾಗಿದ್ದು, ಈ ಮಧ್ಯೆ ಬೈಕ್ ಟ್ಯಾಕ್ಸಿ ಬೆಂಬಲಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ದೂರು ದಾಖಲು ಮಾಡಿದೆ.
ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಇಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಕಳೆದ ಏಪ್ರಿಲ್‌ನಲ್ಲಿ ಹೈಕೋರ್ಟ್ ಬೈಕ್ ಟ್ಯಾಕ್ಸಿ ರದ್ದು ಮಾಡಿ ಆದೇಶ ಮಾಡಿದೆ. ಆದರೂ ಉಲ್ಲಂಘನೆ ಮಾಡಿ ಪರೋಕ್ಷವಾಗಿ ಬೈಕ್ ಟ್ಯಾಕ್ಸಿ ನಡೆಸಲಾಗುತ್ತಿದೆ. ಈ ಮಧ್ಯೆ ಮೋಹನ್ ದಾಸ್ ಪೈ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರು ಬೈಕ್ ಟ್ಯಾಕ್ಸಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇವರಿಗೆ ಕಾನೂನಿನ ಕನಿಷ್ಠ ಜ್ಞಾನ ಇಲ್ಲವೇ? ನ್ಯಾಯಾಲಯದ ಆದೇಶ ಇದ್ದರೂ ಬೈಕ್ ಟ್ಯಾಕ್ಸಿ ಪರ ಟ್ವೀಟ್ ಮಾಡಿ ಪ್ರವೋಕ್ ಮಾಡಿದ್ದಾರೆ. ಬನ್ನಿ ಚರ್ಚೆ ಮಾಡೋಣ. ಬೈಕ್ ಟ್ಯಾಕ್ಸಿಯಿಂದ ಏನೆಲ್ಲಾ ಸಮಸ್ಯೆಗಳು ಆಗುತ್ತೆ ಎಂದು ಹೇಳುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್ ಮೇಲಿನ ದಾಳಿ ಖಂಡನೆ
ಇನ್ನೂ ಕೆಲವು ಬೈಕ್ ಟ್ಯಾಕ್ಸಿ ಚಾಲಕರು, ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ಪ್ರತಿಭಟನೆಗೆ ಅವಕಾಶ ಇಲ್ಲ ಎಂಬುದು ಗೊತ್ತಿದ್ದರೂ, ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದು ಕಾನೂನಿನ ಉಲ್ಲಂಘನೆ. ಟ್ವೀಟ್ ಮಾಡಿದ ಮೋಹನ್ ದಾಸ್ ಪೈ ಹಾಗೂ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದ್ದೇನೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ
ಬೈಕ್ ಟ್ಯಾಕ್ಸಿ ನಿಂತಮೇಲೆ ಆಟೋದವರು ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಈ ರೀತಿ ಇದ್ದರೆ ರಿಯಾಲಿಟಿ ಚೆಕ್ ಆಗಲಿ, ಅವರ ವಿರುದ್ಧ ಕ್ರಮ ಆಗಲಿ. ದರ ನಿಗದಿ ಡ್ರೈವರ್‌ಗಳ ಕೈಯಲ್ಲಿ ಇಲ್ಲ. ಎಲ್ಲವೂ ಆಪ್ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿದೆ. ಸರ್ಕಾರದ ದರವನ್ನ ಆರ್‌ಟಿಒ ಜಾರಿ ಮಾಡಲಿ. ಅದರ ಉದ್ದೇಶ ನಿಜಕ್ಕೂ ಇದ್ದರೆ ಸಾರಿಗೆ ಇಲಾಖೆ ಕಾರ್ಪೋರೇಟ್ ಕಂಪನಿಗಳ ವಿರುದ್ಧ ದೂರು ನೀಡಲಿ. ಕಾನೂನು ವಿರುದ್ಧ ಹೇಳಿಕೆ ಕೊಡುವವರ ವಿರುದ್ಧ ಕ್ರಮ ಆಗಬೇಕು. ನ್ಯಾಯಾಲಯದ ಆದೇಶ ಇರುವುದರಿಂದ ಯಾವ ಪ್ರತಿಭಟನೆ ಆಗಿಲ್ಲ. ಈಗ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಬೈಕ್ ಟ್ಯಾಕ್ಸಿಯವರು ಸುಪ್ರೀಂ ಕೋರ್ಟ್‌ಗೆ ಹೋಗಲಿ, ಅಲ್ಲಿ ಡಿಸೈಡ್ ಆಗಲಿ. ಆದರೆ ಕಾರ್ಪೋರೇಟ್ ಕಂಪನಿಯವರ ಮಾತು ಕೇಳಿ ಬೈಕ್ ಟ್ಯಾಕ್ಸಿ ಓಡಿಸೋರು ಪ್ರತಿಭಟನೆ ಮಾಡುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಓಡಿಸುವವರು ಹುಷಾರಾಗಿರಿ. ಕಂಪನಿಯವರು ಪ್ರೇರಣೆ ಕೊಟ್ಟು ನಿಮ್ಮನ್ನು ಕ್ರಿಮಿನಲ್‌ಗಳನ್ನಾಗಿ ಮಾಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನ ಬೀದಿ-ಬೀದಿಗಳಲ್ಲಿ ಮಾತಾಡ್ತಿದ್ದಾರೆ: ಹೆಚ್‌ಡಿಕೆ