ಚಿಕ್ಕಮಗಳೂರು: ಹಗಲಿರುಳೆನ್ನದೆ ಸಮಾಜದ ಶಾಂತಿಗಾಗಿ ಕೆಲಸ ಮಾಡುವ ಪೊಲೀಸರನ್ನು ಪ್ರಾಣಿಗೆ ಹೋಲಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲೆಯ ಕೊಪ್ಪ ತಾಲೂಕಿನ ರೈತ ಸಂಘ ಆರಗ ಜ್ಞಾನೇಂದ್ರ ವಿರುದ್ಧ ಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದೆ.
ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕುರುವಾನೆ ನೇತೃತ್ವದಲ್ಲಿ ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಆರಗ ಜ್ಞಾನೇಂದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆರಗ ಜ್ಞಾನೇಂದ್ರ ಅವರು ಸಾರ್ವಜನಿಕವಾಗಿ ಪೊಲೀಸ್ ಇಲಾಖೆಯನ್ನು ಖಂಡಿಸಿರುವುದು ಖಂಡನೀಯ. ಇದರಿಂದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮೇಲಿನ ಗೌರವ ಹಾಗೂ ಭಯ ಕಡಿಮೆಯಾಗುವುದರ ಜೊತೆ, ಜನರಲ್ಲಿ ಅಭದ್ರತೆಯನ್ನು ಸಹ ಮೂಡಿಸುತ್ತದೆ. ಆದ್ದರಿಂದ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವವರು ತಳ ಸಮುದಾಯದಿಂದ ಬಂದವರು. ಮಹಿಳೆ, ಮಕ್ಕಳ ರಕ್ಷಣೆ ಮಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ. ಹಗಲು-ರಾತ್ರಿ ಎನ್ನದೆ ನಗರ-ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇಂತಹ ಅಧಿಕಾರಿ ವರ್ಗದವರನ್ನು ನಾಯಿಗೆ ಹೋಲಿಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ರೈತ ಸಂಘದ ಕಾರ್ಯಧ್ಯಕ್ಷ ನವೀನ್ ಕರುವಾನೆ ಕೊಪ್ಪ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮಣ್ಣಿನ ಮಗ ಅಂತಾ ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ: ಹೆಚ್‍ಡಿಡಿ