– ವಿಚಿತ್ರ ನಿಯಮ ಖಂಡಿಸಿದ್ದಕ್ಕೆ ಹೊರಹಾಕೋ ಬೆದರಿಕೆ
ಗಾಂಧಿನಗರ: ಋತುಸ್ರಾವ ಆಗಿದೆಯೇ ಇಲ್ಲವೇ ಎಂದು ತಿಳಿಯಲು ಬಲವಂತವಾಗಿ 68 ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ತೆಗೆಸಿ ಪರೀಕ್ಷೆ ನಡೆಸಿರುವ ಘಟನೆ ಗುಜರಾತ್‍ನ ಕಛ್ ಜಿಲ್ಲೆಯ ಭುಜ್‍ನ ಶ್ರೀ ಸಹಜಾನಂದ್ ಗರ್ಲ್ಸ್ ಇನ್‍ಸ್ಟಿಟ್ಯೂಟ್‍ನಲ್ಲಿ ನಡೆದಿದೆ.
ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಯಾನಿಟರ್ ಪ್ಯಾಡ್ ಕಂಡು ಬಂದ ಕಾರಣ ವಿದ್ಯಾರ್ಥಿನಿಯರನ್ನು ಈ ರೀತಿ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಮ್ಮನ್ನ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ಸೇರಿದಂತೆ ನಾಲ್ವರು ಶಿಕ್ಷಕಿಯರು ಬಲವಂತವಾಗಿ ನಮ್ಮ ಒಳಉಡುಪುಗಳನ್ನು ಬಿಚ್ಚಿಸಿದ್ದಾರೆ. ಪ್ರತಿಭಟನೆ ನಡೆಸಿದರೆ ಹಾಸ್ಟಲ್‍ನಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ಅಳಲು ತೊಡಿಕೊಂಡಿದ್ದಾರೆ.
Advertisement
Advertisement
ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‍ನ ಅಡುಗೆ ಕೋಣೆ, ಆವರಣದ ದೇವಸ್ಥಾನಕ್ಕೆ ಪ್ರವೇಶವಿಲ್ಲ ಮತ್ತು ಇತರ ವಿದ್ಯಾರ್ಥಿಗಳ ಜೊತೆಗೆ ಬೆರೆಯುವಂತಿಲ್ಲ ಎಂಬ ನಿಯಮಗಳು ಕಾಲೇಜಿನಲ್ಲಿವೆ ಎಂದು ತಿಳಿದು ಬಂದಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಋತುಸ್ರಾವದ ವಿಷಯವನ್ನು ಮುಚ್ಚಿಡುತ್ತಾರೆ. ಈ ಕಾರಣದಿಂದಾಗಿ ಅವರನ್ನು ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಲಾಯಿತು.
Advertisement
Advertisement
ಪ್ರಿನ್ಸಿಪಲ್ ರೀತಾ ಬೇನ್ ರಾಣಿಗಾ, ಅಡ್ಮಿನಿಸ್ಟ್ರೇಟರ್ ಅನೀತಾ ಬೇನ್, ಶಿಕ್ಷಕಿ ರಮಿಲಾ ಬೇನ್ ಹಾಗೂ ನಯನಾ ಬೇನ್ ವಿದ್ಯಾರ್ಥಿನಿಯರನ್ನು ಶೌಚಾಲಯಲಕ್ಕೆ ಕರೆಸಿ ಅವರ ಬಟ್ಟೆ ಬಿಚ್ಚಿಸಿ ಪರಿಶೀಲನೆ ಮಾಡಿದ್ದಾರೆ. ಪ್ರಿನ್ಸಿಪಲ್ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದ್ದು, ಮಂಗಳವಾರ ಬೆಳಗ್ಗೆ 11ರಿಂದ 12 ಗಂಟೆ ನಡುವೆ ಎಲ್ಲಾ ವಿದ್ಯಾರ್ಥಿನಿಯರನ್ನು ಕರೆಯಲಾಯಿತು. ಬಳಿಕ ಒಬ್ಬೊಬ್ಬ ವಿದ್ಯಾರ್ಥಿಯನ್ನು ಪ್ರಿನ್ಸಿಪಾಲ್ ಕೊಠಡಿಗೆ ಕರೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಈ ಘಟನೆ ಕುರಿತು ತನಿಖೆ ನಡೆಸುವಂತೆ ಗುಜರಾತ್ ರಾಜ್ಯ ಮಹಿಳಾ ಆಯೋಗ ಸಮಿತಿ ರಚಿಸಿದ್ದು, ಸಮಿತಿ ಸದಸ್ಯರು ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಮಾತುಕತೆ ನಡೆಸಿ ವಿಷಯವನ್ನು ಸಂಗ್ರಹಿಸಲಿದ್ದಾರೆ. ಜೊತೆಗೆ ಘಟನೆ ಕುರಿತು ವಿವರಣೆ ನೀಡುವಂತೆ ಕಾಲೇಜಿಗೆ ನೋಟೀಸ್ ನೀಡಲಾಗಿದೆ ಎಂದು ಗುಜರಾತ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಲೀಲಾ ಅಂಕೋಲಿಯಾ ತಿಳಿಸಿದ್ದಾರೆ.