ಕಾರವಾರ: ಕಡಿಮೆ ಅಂಕ ಬಂದಿದೆ ಎಂದು ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದಲೇ ಹೊರ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದಲ್ಲಿ ನಡೆದಿದೆ.
ಕರೋಲೀನಾ ಎನ್ನುವ ವಿದ್ಯಾರ್ಥಿನಿಯು ಕೈಗಾ ಅಣುಶಕ್ತಿ ಕೇಂದ್ರೀಯ ವಿದ್ಯಾಲಯದ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶೇಕಡ 43ರಷ್ಟು ಅಂಕ ಗಳಿಸಿ ಪಾಸಾಗಿದ್ದಳು. ವಿದ್ಯಾರ್ಥಿನಿ ಇನ್ನು ಇದೇ ಸಂಸ್ಥೆಗೆ ಸೇರಿದ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಳು. ಇತ್ತೀಚೆಗೆ 10ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣ ನೀಡಿ ಕಾಲೇಜಿನಿಂದ ಪ್ರಾಂಶುಪಾಲರು ತೆಗೆದುಹಾಕಿದ್ದಾರೆ.
Advertisement
Advertisement
ಏಕಾಏಕಿ ಕಾಲೇಜಿನ ತೀರ್ಮಾನದಿಂದಾಗಿ ವಿದ್ಯಾರ್ಥಿನಿಯು ತೊಂದರೆ ಅನುಭವಿಸಿದ್ದಾಳೆ. ವಿದ್ಯಾರ್ಥಿನಿ ಕುಟುಂಬವು ಕೈಗಾ ಅಣು ಸ್ಥಾವರಕ್ಕೆ ಭೂಮಿ ನೀಡಿ ನಿರಾಶ್ರಿತ ಕುಟುಂಬವಾಗಿದೆ. ಹೀಗಾಗಿ ನಿರಾಶ್ರಿತ ಕುಟುಂಬಕ್ಕೆ ಕಡ್ಡಾಯವಾಗಿ ದಾಖಲಾತಿ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದರೂ, ಒಂದು ತಿಂಗಳವರೆಗೆ ವಿದ್ಯಾರ್ಥಿಯನ್ನು ದಾಖಲೆ ಮಾಡಿಕೊಂಡು ನಂತರ ಹೊರಹಾಕಿದ್ದಾರೆ. ಕೈಗಾ ಉದ್ಯೋಗಿಗಳ ಮಕ್ಕಳು ಕೂಡ ಕಮ್ಮಿ ಅಂಕ ಬಂದಿದ್ದರೂ, ಅವರಿಗೆ ಮಾತ್ರ ಪ್ರವೇಶ ನೀಡಿ ಅನ್ಯಾಯ ಎಸಗಿ, ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಆಡಳಿತ ವರ್ಗ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
Advertisement
ಕಾಲೇಜಿನ ನಿರ್ಧಾರವನ್ನು ವಿರೋಧಿಸಿದ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಸ್ಥಳೀಯರೊಂದಿಗೆ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬೇರೆ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ದಿನಾಂಕ ಮುಗಿದಿದ್ದು, ಬೇರೆ ಕಾಲೇಜಿನಲ್ಲಿ ಪ್ರವೇಶ ಸಿಗದೇ ವಿದ್ಯಾರ್ಥಿನಿಯು ಒಂದು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.