ಚಿಕ್ಕೋಡಿ: ಕಾಲೇಜು ಬಸ್ ಹಾಗೂ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಗೆ ಬಸ್‍ನಲ್ಲಿದ್ದ 39 ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಲಾರಿ ಚಾಲಕರಾದ ವಿಜಯಪುರ ಜಿಲ್ಲೆಯ ಕನಮಡಿ ಗ್ರಾಮದ ನಿವಾಸಿ ಮಲ್ಲಿಕ್ ಮುಜಾವರ್ (40) ಹಾಗೂ ಕಾಲೇಜು ಬಸ್ ಚಾಲಕ ಅಥಣಿ ನಿವಾಸಿ ರಘುನಾಥ್ ಅವತಾಡೆ (45) ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಅಥಣಿ ಹೊರವಲಯದಲ್ಲಿನ ಬನಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ್ದ ಕಾಲೇಜು ಬಸ್‍ನಲ್ಲಿ 75 ವಿದ್ಯಾರ್ಥಿನಿಯರು ಹಾಗೂ 3 ಜನ ಸಿಬ್ಬಂದಿಗಳಿದ್ದರು.
ಈ ಬಸ್ ಹಾಸ್ಟೆಲ್‍ನಿಂದ ಕಾಗವಾಡ – ವಿಜಯಪುರ ಹೆದ್ದಾರಿ ಪಕ್ಕದ ಕಾಲೇಜಿನ ಗೇಟ್ ಒಳಗಡೆ ಹೋಗಲು ತಿರುಗುತ್ತಿದ್ದಾಗ ಲಾರಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ 39ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆ ಸೇರಿಸಲಾಗಿದೆ. ಓರ್ವ ಶಿಕ್ಷಕಿಗೆ ಗಂಭೀರ ಗಾಯವಾಗಿರುವ ಪರಿಣಾಮ ಬೆಳಗಾವಿಗೆ ರವಾನಿಸಲಾಗಿದೆ. ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೂ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಮುಂಬೈ ಪೊಲೀಸರಿಗೆ ಮತ್ತೆ ದಾಳಿ ಬೆದರಿಕೆ – ಆತಂಕ ಸೃಷ್ಟಿಸಿದ ಪಾಕ್ ಸಂದೇಶ
ಸ್ಥಳಕ್ಕೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯಾರ್ಥಿನಿಯರನ್ನು ಸಾಗಿಸಲಾಗುತ್ತಿತ್ತು ಎನ್ನುವ ಆರೋಪ ಬಂದ ಹಿನ್ನೆಲೆಯಲ್ಲಿ ಅಥಣಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿರುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೃತ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ: ಸೂಲಿಬೆಲೆ