ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸಿಕ್ಕಪಟ್ಟೆ ಚಳಿ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಸೋಮವಾರ ಬೀದರ್ ನಲ್ಲಿ ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್ ಕಡಮೆ ತಾಪಮಾನ ದಾಖಲಾಗಿದೆ. ಬರೀ ಬೀದರ್ ಮಾತ್ರವಲ್ಲ ಶಿವಮೊಗ್ಗ, ಚಿತ್ರದುರ್ಗ, ಹಾಸನ, ವಿಜಯಪುರ, ರಾಯಚೂರು ಸೇರಿದಂತೆ ಹಲವೆಡೆ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಈ ರೀತಿಯ ವಾತಾವರಣವಿಲ್ಲ. ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿಲ್ಲ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗಿದೆ.
Advertisement
Advertisement
ಈ ರೀತಿ ಕನಿಷ್ಠ ತಾಪಮಾನ ದಾಖಲಾಗಲು ಪ್ರಮುಖ ಕಾರಣ ಶುಭ್ರವಾದ ನೀಲಿ ಆಕಾಶ. ಕಳೆದ ವಾರ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಆದರೆ ಈ ವಾರ ಮೋಡವೇ ಇಲ್ಲ. ಹೀಗಾಗಿ ಬೆಳಗ್ಗಿನ ಸಮಯದಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದೆ.
Advertisement
ಉತ್ತರ ಭಾರತದಲ್ಲಿ ಮಳೆಯಾಗ್ತಿದ್ದು, ಅಲ್ಲಿನ ಶೀತ ಗಾಳಿಯ ಪ್ರಭಾವವೂ ಕೂಡ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಕಾರಣವಾಗಿದೆ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಯ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
Advertisement
ವಿಶೇಷವೆಂದರೆ ದೇಶದಲ್ಲೇ ಸೋಮವಾರ ಗರಿಷ್ಠ ತಾಪಮಾನ ನಮ್ಮ ರಾಜ್ಯದಲ್ಲಿ ದಾಖಲಾಗಿದೆ. ಕಾರವಾರದಲ್ಲಿ ಸೋಮವಾರ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.