ಲಕ್ನೋ: 12 ವರ್ಷದ ಬಾಲಕನೊಬ್ಬನ ಗಂಟಲಿನಲ್ಲಿ ಸಿಲುಕಿದ್ದ ನಾಣ್ಯವನ್ನು ವೈದ್ಯರು ಏಳು ವರ್ಷಗಳ ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ವಿಶೇಷ ಪ್ರಕರಣ ಉತ್ತರ ಪ್ರದೇಶದ (Uttar Pradesh, ENT, ENT surgeon, Lucknow) ಹಾರ್ಡೋಯ್‍ನಲ್ಲಿ ನಡೆದಿದೆ.
ಬಾಲಕ ಐದು ವರ್ಷದವರಾಗಿದ್ದಾಗ ಒಂದು ರೂ. ನಾಣ್ಯವನ್ನು ನುಂಗಿದ್ದ. ಅದು ಗಂಟಲಿನ ಅನ್ನನಾಳದ ಒಂದು ಭಾಗದಲ್ಲಿ ಅಂಟಿಕೊಂಡಿತ್ತು. ಇಷ್ಟು ವರ್ಷ ಬಾಲಕನಿಗೆ ಹೆಚ್ಚಿನ ಸಮಸ್ಯೆಯಾಗದ ರೀತಿಯಲ್ಲಿ ಅಂಟಿಕೊಂಡಿತ್ತು. ಇದೀಗ ವಿಶೇಷ ಶಸ್ತ್ರಚಿಕಿತ್ಸೆ ಮೂಲಕ ಆತನ ಗಂಟಲಿನಲ್ಲಿದ್ದ ನಾಣ್ಯವನ್ನು ಹೊರಗೆ ತೆಗೆಯಲಾಗಿದೆ ಎಂದು ಇಎನ್‍ಟಿ ಶಸ್ತ್ರಚಿಕಿತ್ಸಕ (ENT surgeon) ಡಾ.ವಿವೇಕ್ ಸಿಂಗ್ ತಿಳಿಸಿದ್ದಾರೆ.
ಬಾಗೌಲಿಯ ಮುರಳಿಪುರವ ಗ್ರಾಮದ ನಿವಾಸಿ ಅಂಕುಲ್ ಎಂಬ ಬಾಲಕನಿಗೆ ಈ ವರ್ಷ ಏಪ್ರಿಲ್‍ನಲ್ಲಿ ಹೊಟ್ಟೆ ನೋವು ಎಂದು ವೈದ್ಯರ ಬಳಿ ತೋರಿಸಲಾಗಿತ್ತು. ಚಿಕಿತ್ಸೆ ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಬಳಿಕ ಜೂನ್ 4 ರಂದು, ಆತನಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ವೈದ್ಯರು ಪರೀಕ್ಷೆ ನಡೆಸಿದಾಗ ಬಾಲಕನ ಗಂಟಲಿನಲ್ಲಿ ಒಂದು ರೂ. ನಾಣ್ಯ ಇರುವುದು ಪತ್ತೆಯಾಗಿತ್ತು.
ಗಂಟಲಿನಲ್ಲಿ ಅಂಟಿಕೊಂಡಿದ್ದ ನಾಣ್ಯ ಕಪ್ಪಾಗಲು ಪ್ರಾರಂಭಿಸಿತ್ತು. ಬಾಲಕನಿಗೆ ಒಂದೂವರೆ ತಿಂಗಳ ಹಿಂದೆ ಜಾಂಡೀಸ್ ಇರುವುದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ನಾಣ್ಯ ತೆಗೆದ ಬಳಿಕವೂ ಬಾಲಕನಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ.