– ಜುಲೈ 24ರವರೆಗೆ ನ್ಯಾಯಾಂಗ ಬಂಧನ
ವಿಜಯಪುರ: 1998ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್‌ನಲ್ಲಿ (Coimbatore Bomb Blast) ಪ್ರಮುಖ ಪಾತ್ರವಹಿಸಿದ್ದ ಆರೋಪಿಯನ್ನು ಕೊಯಮತ್ತೂರು ಪೊಲೀಸರು ವಿಜಯಪುರದಲ್ಲಿ (Vijayapura) ಬಂಧಿಸಿದ್ದಾರೆ.
ಸಿದ್ದಿಕಿ ರಾಜ್ ಬಂಧಿತ ಆರೋಪಿ. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಿದ್ದಿಕಿ ರಾಜ್ ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿ ಕಳೆದ 12 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಬ್ಲಾಸ್ಟ್ ಬಳಿಕ ತಮಿಳುನಾಡಿನಿಂದ ತಲೆ ಮರೆಸಿಕೊಂಡಿದ್ದ ಸಿದ್ದಿಕಿ ರಾಜ್ ಕಳೆದ 27 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ ಆರೋಪಿ ಸಿದ್ದಿಕಿ ರಾಜ್ ಕೊನೆಗೆ ವಿಜಯಪುರ ನಗರದಲ್ಲಿ ಗುಪ್ತವಾಗಿ ಠಿಕಾಣಿ ಹೂಡಿದ್ದ. ಆರೋಪಿ ಸಿದ್ದಿಕಿ ರಾಜ್‌ನನ್ನು ಪತ್ತೆ ಮಾಡಿದ ಕೊಯಮತ್ತೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ಸಿದ್ದಿಕಿಯನ್ನು ಐದನೇ ಕ್ರಿಮಿನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ವರ್ಜಿನ್ ವೆಸ್ಟಾ ಅವರು ಅಲ್ ಉಮ್ಮಾ ಚಳವಳಿಯ ಸದಸ್ಯ ಟೈಲರ್ ರಾಜಾನನ್ನು ಜುಲೈ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳಿಕ ಆತನನ್ನು ಬಿಗಿ ಭದ್ರತೆಯಲ್ಲಿ ಕೊಯಮತ್ತೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಕೊಯಮತ್ತೂರು ಬಾಂಬ್ ಬ್ಲಾಸ್ಟ್:
1998ರ ಫೆಬ್ರವರಿ 14 ರಂದು ಕೊಯಮತ್ತೂರಿನ ಆರ್.ಎಸ್. ಪುರಂನಲ್ಲಿ ಬಿಜೆಪಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು. ಪಕ್ಷದ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಬೇಕಿತ್ತು. ಆ ಸಮಯದಲ್ಲಿ, ಸಾರ್ವಜನಿಕ ಸಭೆಯ ವೇದಿಕೆಯಿಂದ 100 ಮೀಟರ್ ದೂರದಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು.
ಅಡ್ವಾಣಿ ಅವರು ಬರಬೇಕಿದ್ದ ವಿಮಾನ ವಿಳಂಬವಾದ ಕಾರಣ ಸ್ಫೋಟ ಘಟನೆಯಿಂದ ತಪ್ಪಿಸಿಕೊಂಡು ಬದುಕುಳಿದಿದ್ದರು. ನಂತರ ಕೊಯಮತ್ತೂರಿನ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದು, ಇದರಲ್ಲಿ 58 ಜನರು ಸಾವಿಗೀಡಾಗಿದ್ದರು. 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.