ಮಡಿಕೇರಿ: ಒಂದೂವರೆ ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿತೋಟದಲ್ಲೇ ಕಾಲ ಕಳೆದ ಘಟನೆ ವಿರಾಜಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡಿನ ತಿರುವಣ್ಣಾಮಲೈನಿಂದ ಕೂಲಿ ಕೆಲಸಕ್ಕೆ ಬಂದಿರುವ ನಾಗರಾಜು ಮತ್ತು ಸೀತಾ ದಂಪತಿಯ ಮಗು ನಿತ್ಯಾಶ್ರೀ ಇಡೀ ರಾತ್ರಿ ಕಾಫಿತೋಟದಲ್ಲೇ ಕಾಲ ಕಳೆದಿದ್ದಾಳೆ. ಭಾನುವಾರ ಸಂಜೆ ವೆಸ್ಟ್ ನೆಮ್ಮಲೆ ಗ್ರಾಮದ ರಾಜಕುಶಾಲಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಮಗುವನ್ನು ಸೀರೆಯೊಂದರಲ್ಲಿ ಜೋಲಿ ಕಟ್ಟಿ ಮಲಗಿಸಿದ್ದರು. ಬಳಿಕ ಬಂದು ನೋಡಿದಾಗ ಮಗು ನಾಪತ್ತೆಯಾಗಿತ್ತು. ಕೂಡಲೇ ಮಗುವನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ತಕ್ಷಣವೇ ದಂಪತಿ ಪೊಲೀಸರಿಗೆ ಮಗು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.
Advertisement
Advertisement
ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕತ್ತಲೆಯಾಗಿದ್ದರಿಂದ ಟಾರ್ಚ್ ಹಾಕಿ ಅರಣ್ಯ ಇಲಾಖೆಯವರ ಸಹಾಯ ಪಡೆದು ಮಗುವಿಗಾಗಿ ಹುಡುಕಾಡಿದ್ದಾರೆ. ಆದರೂ ಮಗು ಮಾತ್ರ ಪತ್ತೆಯಾಗಿರಲಿಲ್ಲ. ಪುನಃ ಇಂದು ಬೆಳಗ್ಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಡಿದಾಗ ಮಗು ನಿತ್ಯಾಶ್ರೀ ಕಾಫಿ ತೋಟದ ಎತ್ತರವಾದ ಪ್ರದೇಶದ ಮರದ ಬುಡದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಮಗುವನ್ನು ಪೋಷಕರ ಮಡಿಲಿಗೆ ಸೇರಿಸಿದ್ದಾರೆ.