ಬೆಂಗಳೂರು: ದಿಢೀರ್ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎರಡು ದಿನಗಳಷ್ಟೇ ಸಿದ್ಧಾರ್ಥ್ ಅವರು ಕಂಪನಿ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ತುಂಬಾ ನೋವಿನಿಂದ ಪತ್ರವನ್ನು ಬರೆದಿದ್ದಾರೆ.
Advertisement
ಸಿದ್ಧಾರ್ಥ್ ಪತ್ರ:
ನಾನು ಕಳೆದ 37 ವರ್ಷದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದೇನೆ. ಕಾಫಿ ಡೇ ಮೂಲಕ 30 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಆದರೆ ನನ್ನ ಪರಿಶ್ರಮದ ಹೊರತಾಗಿಯೂ ಆ ಎರಡೂ ಕಂಪನಿಗಳು ಲಾಭದಲ್ಲಿ ನಡೆಯಲಿಲ್ಲ. ನನಗೆ ಅನೇಕ ಕಡೆಯಿಂದ ಒತ್ತಡ ಹೆಚ್ಚಾಗಿದ್ದು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾರೆ.
Advertisement
Advertisement
ಕಂಪನಿಯಲ್ಲಿ ಷೇರು ಹೂಡಿದ್ದ ಖಾಸಗಿ ಪಾಟ್ನರ್ ಗಳು ತಮ್ಮ ಷೇರನ್ನು ವಾಪಸ್ ಕೊಡುವಂತೆ ಒತ್ತಾಯ ಹಾಕುತ್ತಿದ್ದಾರೆ. ಸ್ನೇಹಿತರೊಬ್ಬರ ಬಳಿ ನಾನು ದೊಡ್ಡ ಮಟ್ಟದಲ್ಲಿ ಸಾಲ ಮಾಡಿದ್ದೇನೆ. ಇತರೆ ಸಾಲಗಾರರ ಒತ್ತಡದಿಂದ ಇಂದು ನನಗೆ ಈ ಪರಿಸ್ಥಿತಿ ಬಂದಿದೆ. 6 ತಿಂಗಳ ಹಿಂದೆಯಷ್ಟೇ ಅಪಾರ ಪ್ರಮಾಣದಲ್ಲಿ ಸಾಲ ಪಡೆದಿದ್ದೇನೆ. ಸಾಲಗಾರರು ತುಂಬಾ ಕಿರುಕುಳ ಕೊಡುತ್ತಿದ್ದಾರೆ.
Advertisement
ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅವರು ಕಿರುಕುಳ ನೀಡುತ್ತಿದ್ದಾರೆ. ಪತ್ರದಲ್ಲಿ ಈ ಹಿಂದಿನ ಐಟಿಯ ಡಿಜಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಈ ಮೂಲಕ ಮೈಂಡ್ ಟ್ರೀ ಮಾರಾಟದ ಡೀಲ್‍ಗೆ ಅಡ್ಡಿಯಾದರು. ಅದಾದ ಬಳಿಕ ಕಾಫಿ ಡೇ ಷೇರಿಗೂ ಐಟಿ ಕಣ್ಣು ಹಾಕಿತ್ತು. ನನಗೆ ಖಾಸಗಿ ಕಂಪನಿ ಕಿರುಕುಳ ನೀಡುತ್ತಿದೆ. ನಾನು ಸಾಕಷ್ಟು ಹೋರಾಟ ಮಾಡಿದೆ. ಆದರೆ ಅವರ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ನಾನು ಮೋಸ ಹೋದೆ. ನಮಗೆ ಕೆಲವರು ನಂಬಿಕೆ ದ್ರೋಹ ಮಾಡಿದ್ದಾರೆ. ನಾನು ಸಿಬ್ಬಂದಿಯ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಷೇರುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಾನು ಖಾಸಗಿಯಿಂದ ಸಾಲ ತೆಗೆದುಕೊಂಡಿದ್ದೆ. ನಾನು ಯಾರಿಗೂ ಮೋಸ ಮಾಡಬೇಕೆಂದು ಈ ಪತ್ರ ಬರೆಯುತ್ತಿಲ್ಲ. ಓರ್ವ ಉದ್ದಿಮೆದಾರನಾಗಿ ನಾನು ಸೋತಿದ್ದೇನೆ ಎಂದಿದ್ದಾರೆ.
ನಾನು ನಿಮ್ಮ ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ, ಈ ಎಲ್ಲ ಉದ್ಯಮಗಳನ್ನು ನೀವು ಹೊಸ ಆಡಳಿತ ಮಂಡಳಿಯೊಂದಿಗೆ ಮುಂದುವರೆಸಿ. ಈಗ ಆಗಿರುವ ಎಲ್ಲ ತಪ್ಪುಗಳಿಗೂ ನಾನೇ ಹೊಣೆಯಾಗಿದ್ದು, ಪ್ರತಿಯೊಂದು ಹಣಕಾಸು ವ್ಯವಹಾರಕ್ಕೂ ನಾನೇ ಹೊಣೆ. ನನ್ನ ತಂಡ ಆಡಿಟರ್ಸ್ ಹಾಗೂ ಹಿರಿಯ ಆಡಳಿತ ಮಂಡಳಿಗೂ ಹಣಕಾಸು ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಬರೆದಿದ್ದಾರೆ.
ನನ್ನ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡಲು ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ನಾನು ಕಂಪನಿ ನಡೆಸುವುದರಲ್ಲಿ ವಿಫಲನಾದೆ. ಇದು ನನ್ನ ಪರಿಸ್ಥಿತಿಯಾಗಿದೆ. ಕೆಲವರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿದಾಯ ಪತ್ರ ಬರೆದಿದ್ದಾರೆಯೋ ಎಂಬ ಅನುಮಾನ ಮೂಡಿದೆ.
https://www.youtube.com/watch?v=uz6xiFzo-_Q