ಸಿಹಿ ಪ್ರಿಯರಿಗಾಗಿ ತೆಂಗಿನಕಾಯಿ ರಾಬ್ರಿ ರೆಸಿಪಿ

Public TV
2 Min Read
COCONUT RABRI 1

ತೆಂಗಿನಕಾಯಿ ರಾಬ್ರಿ ಉತ್ತರ ಭಾರತದ ಜನಪ್ರಿಯ ಸಿಹಿ ತಿನಿಸು. ಯಾವುದೇ ಭಾರತೀಯ ಊಟ ಸಿಹಿಯಿಲ್ಲದೇ ಪರಿಪೂರ್ಣವಾಗಲಾರದು. ಅದೇ ರೀತಿ ಉತ್ತರ ಭಾರತದಲ್ಲಿ ತೆಂಗಿನಕಾಯಿ ರಾಬ್ರಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಸಿಹಿ ತಿನಿಸು ಮೊದಲಿಗೆ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಇದು ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ನೆಚ್ಚಿನ ಸಿಹಿಯಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ತೆಂಗಿನಕಾಯಿ ರಾಬ್ರಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ವೆಜ್‌ಪ್ರಿಯರಿಗಾಗಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ರೆಸಿಪಿ

COCONUT RABRI

ಬೇಕಾಗುವ ಸಾಮಗ್ರಿಗಳು:
ಕ್ರೀಮ್ ಮಿಲ್ಕ್ – 1 ಲೀಟರ್
ತುರಿದ ತೆಂಗಿನಕಾಯಿ – ಅರ್ಧ ಕಪ್
ಖೋಯಾ – ಅರ್ಧ ಕಪ್
ಸಕ್ಕರೆ – ಅಗತ್ಯಕ್ಕೆ ತಕ್ಕಷ್ಟು
ಗೋಡಂಬಿ – 10-15
ಏಲಕ್ಕಿ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಬಾದಾಮಿ ಮತ್ತು ಪಿಸ್ತಾ – ಸ್ವಲ್ಪ
ಕೇಸರಿ – ಸ್ವಲ್ಪ

COCONUT RABRI

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಗೋಡಂಬಿ ಹಾಕಿಕೊಂಡು ಅದಕ್ಕೆ ನೀರು ಹಾಕಿ 15 ನಿಮಿಷಗಳ ಕಾಲ ನೆನೆಸಿಡಿ.
* ಈಗ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಕ್ರೀಮ್ ಮಿಲ್ಕ್ ಹಾಕಿಕೊಂಡು ಕುದಿಸಿಕೊಳ್ಳಿ. ಹಾಲು ಕುದಿಯಲು ಪ್ರಾರಂಭವಾದ ಬಳಿಕ ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮ್‌ನಲ್ಲಿ ಇಟ್ಟುಕೊಂಡು ಹಾಲು ಸ್ವಲ್ಪ ಕುಂದುವವರೆಗೆ ಕುದಿಸಿಕೊಳ್ಳಿ. ಈ ವೇಳೆ ಮಧ್ಯ ಮಧ್ಯ ಹಾಲನ್ನು ತಿರುವಿಕೊಳ್ಳುವುದು ಒಳ್ಳೆಯದು.
* ಬಳಿಕ ಇದಕ್ಕೆ ಕೇಸರಿ ಮತ್ತು ಖೋಯಾವನ್ನು ಹಾಕಿಕೊಂಡು ಹಾಲು ತಳಹಿಡಿಯದಂತೆ ಚನ್ನಾಗಿ ತಿರುವಿಕೊಳ್ಳಿ.
* ಈಗ ನೆನೆಸಿಟ್ಟ ಗೋಡಂಬಿಯನ್ನು ಒಂದು ಮಿಕ್ಸರ್‌ನಲ್ಲಿ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
* ನಂತರ ಕುದಿಯುತ್ತಿರುವ ಹಾಲಿಗೆ ತುರಿದ ತೆಂಗಿನಕಾಯಿ ಹಾಗೂ ಸಕ್ಕರೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ರುಬ್ಬಿದ ಗೋಡಂಬಿ ಮಿಶ್ರಣವನ್ನೂ ಸೇರಿಸಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
* ಹಾಲು ಮಂದವಾಗುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
* ಈಗ ಒಂದು ಸರ್ವಿಂಗ್ ಬೌಲ್‌ನಲ್ಲಿ ತೆಂಗಿನಕಾಯಿ ರಾಬ್ರಿಯನ್ನು ಹಾಕಿಕೊಂಡು ಅದರ ಮೇಲೆ ಹೆಚ್ಚಿದ ಬಾದಾಮಿ ಮತ್ತು ಪಿಸ್ತಾವನ್ನು ಹಾಕಿ ಸವಿಯಲು ಕೊಡಿ. ಇದನ್ನೂ ಓದಿ: ಸುಲಭವಾಗಿ ಮಾಡ್ಬೋದು ಕೆಟೊ ಮಗ್ ಕೇಕ್

Share This Article