– ಸಿದ್ದರಾಮಯ್ಯಗೆ ನಾಚಿಕೆಯಾಗ್ಬೇಕು
– ನಮ್ಮ ಶಾಸಕರು ಸಿಂಹದ ಮರಿಗಳಿದ್ದಂತೆ
ಶಿವಮೊಗ್ಗ: ದೋಸ್ತಿ ಶಾಸಕರೇ ಈ ಸರ್ಕಾರವನ್ನು ಒಪ್ಪುತ್ತಿಲ್ಲ, ಬಿಜೆಪಿಯಂತೂ ಮೊದಲೇ ಇದನ್ನು ಒಪ್ಪಲ್ಲ, ಜನರೂ ನಂಬಲ್ಲ. ಹೀಗಾಗಿ ಈ ಬಾರಿ ಸರ್ಕಾರ ಬೀಳೋದು ಖಚಿತ. ಅದಕ್ಕೂ ಮುನ್ನಾ ಮೈತ್ರಿ ನಾಯಕರು ರಾಜೀನಾಮೆ ನೀಡಿದರೆ ಗೌರವವಿರುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಈ ಬಾರಿ ಮೈತ್ರಿ ಸರ್ಕಾರ ಉಳಿಯಲ್ಲ ಅನ್ನೋ ನಂಬಿಕೆ ನನಗಿದೆ. ದೋಸ್ತಿ ಶಾಸಕರೇ ಈ ಸರ್ಕಾರವನ್ನು ಒಪ್ಪುತ್ತಿಲ್ಲ, ಬಿಜೆಪಿಯಂತೂ ಮೊದಲೇ ಇದನ್ನು ಒಪ್ಪಲ್ಲ, ಜನರೂ ನಂಬಲ್ಲ. ಹೀಗಾಗಿ ಗೌರವ ಇರಬೇಕೆಂದರೆ ಮೈತ್ರಿ ಸರ್ಕಾರದ ನಾಯಕರು ತಕ್ಷಣ ರಾಜೀನಾಮೆ ಕೊಡಬೇಕು. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡಿಲ್ಲ ಎನ್ನುವುದು ಈಗ ಸಾಬೀತಾಗಿದೆ. ಅತೃಪ್ತ ಶಾಸಕರೇ ಬಾಯಿಬಿಟ್ಟು ಈ ಬಗ್ಗೆ ಹೇಳುತ್ತಿದ್ದಾರೆ. ಆದರೆ ಕೈ-ದಳ ನಾಯಕರು ಇದನ್ನು ಒಪ್ಪದೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಆಪರೇಷನ್ ಫೇಲ್ ಎಂದು ಆರೋಪ ಮಾಡಿದ್ದರು. ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರೇ ಹಗಲು ರಾತ್ರಿ ಒದ್ದಾಡುತ್ತಿದ್ದಾರೆ. ಆ ಬಗ್ಗೆ ಯೋಚನೆ ಮಾಡೋ ಬದಲು ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ. ಸಿದ್ದರಾಮಯ್ಯಗೆ ನಾಚಿಗೆ ಆಗಬೇಕು. ಅಲ್ಪಮತಕ್ಕೆ ಸರಕಾರ ಕುಸಿದಿದೆ. ಈ ಮೈತ್ರಿ ಸರ್ಕಾರ ಈ ಬಾರಿ ಮಾತ್ರ ಉಳಿಯಲ್ಲ. ಶೀಘ್ರದಲ್ಲೇ ಪತನವಾಗುತ್ತದೆ. ಆ ನಂಬಿಕೆ ನನಗಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಇನ್ನೂ ಅನೇಕ ಅತೃಪ್ತ ಶಾಸಕರು ಕಾಂಗ್ರೆಸ್, ಜೆಡಿಎಸ್‍ನಿಂದ ಹೊರ ಬರಲಿದ್ದಾರೆ. ಸಿಎಂ ಬಹುಮತ ಸಾಬೀತು ಪಡಿಸಲಿ. ಆಗ ನಾವು ಈ ಸರ್ಕಾರವನ್ನು ಒಪ್ಪುತ್ತೇವೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಸೇರಲು ಅವಕಾವಿಲ್ಲ. ಈ ಬಗ್ಗೆ ಬಿಎಸ್‍ವೈ ಕೂಡ ಸ್ಪಷ್ಟನೆ ನೀಡಿದ್ದಾರೆ. ದಿನವೂ ಒಂದೊಂದು ಹೊಸ ಸುದ್ದಿ ಸೃಷ್ಟಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯ ಯಾವುದೇ ಶಾಸಕರು ಬೇರೆ ಪಕ್ಷಕ್ಕೆ ಸೇರ್ಪಡೆ ಆಗಲ್ಲ. ಬಿಜೆಪಿ ಶಾಸಕರು ಸಿಂಹದ ಮರಿಗಳು ಇದ್ದ ಹಾಗೆ. ನಮ್ಮವರು ಬೇರೆ ಪಕ್ಷಕ್ಕೆ ಹೋಗುವುದು ಕೇವಲ ಊಹಾಪೋಹ. ಇದೆಲ್ಲ ಸುಳ್ಳು ಸುದ್ದಿ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.