ಬೆಂಗಳೂರು: ಹೊಸದಾಗಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದ 15ನೇ ಕರ್ನಾಟಕ ವಿಧಾನಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಇಂದಿನಿಂದ ಆರಂಭವಾಗುವ ಅಧಿವೇಶನ ಬಹಳಷ್ಟು ಕುತೂಹಲ ಮೂಡಿಸಿದ್ದು, ದೋಸ್ತಿ ಸರ್ಕಾರಕ್ಕೆ ಸಾಕಷ್ಟು ಅಗ್ನಿ ಪರೀಕ್ಷೆಗಳು ಎದುರಾಗುವ ಸಾಧ್ಯತೆ ಇದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯುತ್ತಿರುವ ಪ್ರಥಮ ಅಧಿವೇಶನವಾಗಿದೆ. ನಿಯಮದಂತೆ ಹೊಸ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲರು ಜಂಟಿ ಸದನಗಳಾದ ವಿಧಾನಸಭೆ-ವಿಧಾನಪರಿಷತ್ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಜ್ಯಪಾಲ ವಜೂಭಾಯ್ ವಾಲಾ ಸಮ್ಮಿಶ್ರ ಸರ್ಕಾರ ಭವಿಷ್ಯದ ನಡೆಯ ಚಿತ್ರಣವನ್ನು ಮುಂದಿಡಲಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಂಗಳವಾರ ಮತ್ತು ಬುಧವಾರ ಎರಡೂ ಸದನಗಳಲ್ಲಿ ಪ್ರತ್ಯೇಕವಾಗಿ ಚರ್ಚೆ ಸಾಗಲಿದೆ. ಈ ಅಧಿವೇಶನದ ಕೇಂದ್ರಬಿಂದು ಜುಲೈ 5ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿರುವ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್ ಆಗಿದೆ.
ರೈತರ ಸಾಲ ಮನ್ನಾ, ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಮುಂದುವರಿಕೆಯ ಒತ್ತಡದ ನಡುವೆ ಗುರುವಾರ ಕುಮಾರಸ್ವಾಮಿ ವಿಧಾನಸಭೆಗೆ ಹೊಯ್ಯಲಿರುವ ಸೂಟ್‍ಕೇಸ್ ಸಾಕಷ್ಟು ಕುತೂಹಲ ಕೆರಳಿಸಿದೆ. ಅಧಿವೇಶನದ ಕೊನೆಯ ದಿನವಾಗಿರೋ ಜುಲೈ 12ರಂದು ಬಜೆಟ್‍ನ್ನು ವಿಧಾನಸಭೆ ಅಂಗೀಕರಿಸಲಿದೆ. ಅಧಿವೇಶನದಲ್ಲಿ ಒಂದೂವರೆ ತಿಂಗಳ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನೇ ಪ್ರಸ್ತಾಪಿಸಿ ಬಿಜೆಪಿ ಸದನದೊಳಗೆ ಹೋರಾಟ ತೀವ್ರಗೊಳಿಸುವುದು ನಿಶ್ಚಿತ.
ರೈತರ ಸಾಲ ಸಂಪೂರ್ಣ ಮನ್ನಾ ಆಗುತ್ತೋ ಅಥವಾ ಷರತ್ತು ಬದ್ಧ ಮನ್ನಾವೋ ಅನ್ನೋದರ ಮೇಲೆ ಬಿಜೆಪಿ ಎರಡೂ ಸದನಗಳಲ್ಲಿ ಹೋರಾಟದ ಸ್ವರೂಪವನ್ನು ತೀರ್ಮಾನಿಸಲಿದೆ. ಒಂದೂವರೆ ತಿಂಗಳಾದರೂ ಸರ್ಕಾರ ಟೇಕಾಫ್ ಆಗಿಲ್ಲ. ಜಿಲ್ಲೆಗಳಿಗೆ ಉಸ್ತುವಾರಿಗಳ ನೇಮಕ ಆಗಿಲ್ಲ. ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿದ್ದರೂ ಮಳೆ ಹಾನಿ ಪರಿಹಾರ ಕ್ರಮಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆರೋಪಿಸಿ ಸದನದೊಳಗೆ ಹೋರಾಟಕ್ಕೆ ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ.
ಈಗಾಗಲೇ ವಿಶ್ವಾಸಮತಯಾಚನೆ ವೇಳೆ 52 ಗಂಟೆ ಸಿಎಂ ಆಗಿದ್ದ ಯಡಿಯೂರಪ್ಪ ಮತ್ತು ಸಿಎಂ ಕುಮಾರಸ್ವಾಮಿ ಮಾತಿನ ಏಟು-ಎದಿರೇಟು ರೋಚಕತೆ ಹುಟ್ಟಿಸಿತ್ತು. ಸಾಲ ಮನ್ನಾ ಮತ್ತು ಸಮ್ಮಿಶ್ರ ಸರ್ಕಾರದ ಬಾಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯನ್ನು ಊಲ್ಲೇಖಿಸಿ ಬಿಜೆಪಿ ಮತ್ತೆ ಮುಗಿಬೀಳುವ ಸಾಧ್ಯತೆಯೂ ಇದೆ.