ವಿಟಿಯು ವಿಭಜನೆಯಿಂದ ಹಿಂದೆ ಸರಿದ ಸಮ್ಮಿಶ್ರ ಸರ್ಕಾರ

Public TV
1 Min Read
hdk vtu collage

ಬೆಂಗಳೂರು: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆಗೆ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಈ ಪ್ರಸ್ತಾಪದಿಂದ ಹಿಂದಕ್ಕೆ ಸರಿದಿದೆ.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲಿ ಪ್ರತ್ಯೇಕ ತಾಂತ್ರಿಕ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟ ಪಡಿಸಿದ್ದಾರೆ ಎಂದು ಸಿಎಂ ಅವರ ಅಧಿಕೃತ ಟ್ವಿಟ್ಟರ್ ಖಾತೆ ತಿಳಿಸಿದೆ.

ಸಿಎಂ ಹೇಳಿದ್ದು ಏನು?
ನಮ್ಮ ಸರ್ಕಾರವು ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಉದ್ದೇಶಿಸಿದೆ. ಈಗ ಕರ್ನಾಟಕದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಂಬಂಧಿತ ವಿಷಯಗಳು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೇಂದ್ರೀಕೃತವಾಗಿವೆ. ಆದ್ದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೌಗೋಳಿಕ ಆಧಾರದ ಮೇಲೆ ಎಂಜಿನಿಯರಿಂಗ್ ಕಾಲೇಜುಗಳನ್ನು ಮರುವಿಂಗಡಣೆ ಮಾಡಿ ಹಾಸನದಲ್ಲಿ ಒಂದು ಹೊಸ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಜೆಟ್‍ನಲ್ಲಿ ಪ್ರಕಟಿಸಿದ್ದರು.

ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆಕ್ರೋಶ ಕೇಳಿ ಬಂದಿತ್ತು. ವಿಟಿಯುಗೆ ಸುಮಾರು 2 ದಶಕದ ಇತಿಹಾಸವಿದೆ, ಕೇವಲ ನಿಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇಬ್ಭಾಗ ಮಾಡುತ್ತಿರುವುದು ಎಷ್ಟು ಸಮಂಜಸ? ಇದು ಬೆಳಗಾವಿ ಜನತೆಗೆ ಮೈತ್ರಿ ಸರಕಾರ ಮಾಡುತ್ತಿರುವ ದ್ರೋಹ. ಕಾಂಗ್ರೆಸ್ ಪಕ್ಷದ ಮುಖಂಡರು ಇದರ ನೇರ ಹೊಣೆಗಾರರಾಗುತ್ತಾರೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಆಗ್ರಹಿಸಿದ್ದರು.

ಹಾಸನ ಸೇರಿದಂತೆ ರಾಜ್ಯದ ಯಾವುದೇ ಭಾಗವನ್ನು ಅಭಿವೃದ್ಧಿ ಮಾಡುವ ವಿಚಾರದಲ್ಲಿ ನಮ್ಮ ವಿರೋಧ ಇಲ್ಲ. ಆದರೆ ಉತ್ತರ ಕರ್ನಾಟಕ ಮತ್ತು ಬೆಳಗಾವಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ? ಈ ಮೂಲಕ ಉತ್ತರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ವಿಟಿಯು ಒಡೆಯುವ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ ಎಂದು ಅಂಗಡಿ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *