ಬೆಂಗಳೂರು: ಮಧ್ಯಂತರ ಚುನಾವಣೆ ನಡೆಯಲ್ಲ ಎಂದು ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡರು ಮತ್ತು ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರೂ ಎರಡೂ ದೋಸ್ತಿ ಪಕ್ಷಗಳು ಮಾತ್ರ ಮಧ್ಯಂತರ ಚುನಾವಣೆಗಾಗಿ ಸಿದ್ಧವಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ.
ಯೋಗ ದಿನದಂದು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡಿ ನಂತರ ಸ್ಪಷ್ಟನೆ ನೀಡಿದ್ದ ದೇವೇಗೌಡರು ಈಗ ಮಧ್ಯಂತರ ಚುನಾವಣೆಗಾಗಿ ಪಕ್ಷ ಸಂಘಟನೆಗೆ ಮತ್ತಷ್ಟು ಚುರುಕು ನೀಡಿದ್ದಾರೆ. ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಮಾಜಿ ಪ್ರಧಾನಿಗಳು ಯಾವುದೇ ಸಮಯದಲ್ಲೂ ಚುನಾವಣೆ ಬರಬಹುದು. ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಿ ಜಿಲ್ಲಾ ಮಟ್ಟದಲ್ಲಿ ಸದಸ್ಯರ ನೋಂದಣಿಗೆ ಚಾಲನೆ ಕೊಡಬೇಕು ಮತ್ತು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷ ಸಂಘಟನೆ ಭಾಗವಾಗಿ ಶೀಘ್ರವೇ ಮಹಿಳಾ ಸಮಾವೇಶ ಮತ್ತು ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಸಮಾವೇಶವನ್ನು ಕೂಡ ನಡೆಸಲು ನಿರ್ಧರಿಸಲಾಗುತ್ತಿದೆ. ಇತ್ತ ಕಾಂಗ್ರೆಸ್‍ನಿಂದ ದೂರ ಉಳಿದಿರುವ ಅಹಿಂದ ಮತಗಳನ್ನು ಮತ್ತೆ ಸೆಳೆಯುವ ಸಲುವಾಗಿ ಆಗಸ್ಟ್‍ನಲ್ಲಿ ಬೃಹತ್ ಅಹಿಂದ ಸಮಾವೇಶಕ್ಕೆ ನಡೆಸಲು ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮಧ್ಯಂತರ ಚುನಾವಣೆಯ ಅನುಮಾನ ಹೊತ್ತಲ್ಲೇ ದೋಸ್ತಿಗಳ ಮುಸುಕಿನ ಗುದ್ದಾಟಕ್ಕೆ ತೇಪೆ ಹಾಕಲು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಮಾಡಿದೆ. ಈ ಮೂಲಕ ಲೋಕಸಭಾ ಚುನಾವಣೆಯವರೆಗೆ ಮೈತ್ರಿ ಸಹಿಸಿಕೊಳ್ಳಿ ಎಂದಿದ್ದ ಕಾಂಗ್ರೆಸ್ ಹೈಕಮಾಂಡ್ ಇನ್ನು ಒಂದಷ್ಟು ದಿನ ಜೆಡಿಎಸ್ ದೋಸ್ತಿ ಸಹಿಸಿಕೊಳ್ಳಿ ಎನ್ನುವ ಕಿವಿ ಮಾತು ಹೇಳೋಕೆ ಮುಂದಾಯ್ತಾ ಎಂಬ ಅನುಮಾನವೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ. ಏಕೆಂದರೆ ಜೆಡಿಎಸ್ ನಾಯಕರ ಮಧ್ಯಂತರ ಚುನಾವಣೆಯ ಮಾತಿನ ಮಧ್ಯೆಯೂ ಕಾಂಗ್ರೆಸ್, ಜೆಡಿಎಸ್ ಸ್ನೇಹಕ್ಕೆ ಜೋತು ಬೀಳುತ್ತಿದೆ. ದೋಸ್ತಿ ನಾಯಕರ ಸಣ್ಣಪುಟ್ಟ ಅಸಮಧಾನಕ್ಕೂ ಕಾಂಗ್ರೆಸ್ ಹೈಕಮಾಂಡ್ ತೇಪೆ ಹಚ್ಚಲು ಮುಂದಾಗಿದೆ.