– ಇವತ್ತು 17 ಶಾಸಕರ ದೊಡ್ಡ ಮೀಟಿಂಗ್
ಬೆಂಗಳೂರು: ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಮಿತ್ರ ಮಂಡಳಿ ಕೆಂಡಾಮಂಡಲವಾಗಿದೆ. ಈ ಹಿನ್ನೆಲೆಯಲ್ಲಿ ಮಿತ್ರಮಂಡಳಿಯ 17 ಶಾಸಕರು ಇಂದು ಸಭೆ ನಡೆಸಲಿದ್ದು, ತಮ್ಮ ನಡೆ ಏನು ಎಂಬುವುದನ್ನು ಸ್ಪಷ್ಟಪಡಿಸುವ ಸಾಧ್ಯತೆಗಳಿವೆ.
ಅಂದು ಮುಂಬೈನಲ್ಲಿ ಮನೆ, ಹೆಂಡತಿ, ಕ್ಷೇತ್ರವನ್ನು ಬಿಟ್ಟು ಇದ್ದವರು, ಇಂದು ಬೆಂಗಳೂರಿನಲ್ಲಿ ಕೊತ ಕೊತ ಕುದಿಯುತ್ತಿದ್ದಾರೆ. ಬಿಜೆಪಿಯ ನಡೆಗೆ ಮಿತ್ರಮಂಡಳಿ ಬೆಂಕಿಯುಂಡೆಯಾಗಿದ್ದು, ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕದಿದ್ದರೂ, ಆಪ್ತರ ಮುಂದೆ ಹೇಳಿಕೊಂಡಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಉಪಚುನಾವಣೆಯಲ್ಲಿ ಸೋತಿರುವ ಅನರ್ಹ ಶಾಸಕರಾದ ಹೆಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್, ನಮಗೆ ಸಿಎಂ ಮೇಲೆ ನಂಬಿಕೆಯಿದ್ದು, ಕೊಟ್ಟ ಮಾತನ್ನು ಅವರು ಉಳಿಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ.
Advertisement
Advertisement
ಸಿಎಂ ಯಡಿಯೂರಪ್ಪ ಚುನಾವಣೆ ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀವಿ ಅಂದಿದ್ದರು. 24 ಗಂಟೆಯಲ್ಲ, 24 ದಿನ ಕಳೆದರೂ ಮಂತ್ರಿನೂ ಇಲ್ಲ, ಕ್ಯಾರೇಯೂ ಅಂತಿಲ್ಲ. ದಾರಿ ತಪ್ಪಿದ ಮಕ್ಕಳಾದಂತೆ ಆದ ಮಿತ್ರಮಂಡಳಿ ಸದಸ್ಯರ ಗೋಳಾಟದ ಬಗ್ಗೆ ಸಿಎಂ ಮಾತ್ರ ಮಾತನಾಡುತ್ತಾರೆ. ಆದರೆ ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಪ ಚುನಾವಣೆ ಗೆದ್ದ ಬಳಿಕ ಮೌನಕ್ಕೆ ಶರಣಾಗಿರುವ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಇತ್ತ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ವಿಶ್ವನಾಥ್, ಎಂ.ಟಿ.ಬಿ ಬೆಂಕಿಯುಂಡೆಯಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.