ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ತಮ್ಮ ಕಚೇರಿಯಲ್ಲಿ ಹಲವು ವರ್ಷಗಳಿಂದ ನಡೆದು ಬಂದಿದ್ದ ಬಿಳಿ ಟವಲ್ (White Towel) ಸಂಸ್ಕೃತಿಯನ್ನು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದ ಹಂಚಿಕೊಳ್ಳಲಾದ ಇತ್ತೀಚಿನ ಪೋಟೋಗಳಲ್ಲಿ, ವಿಜಯ್ ಅವರ ಕುರ್ಚಿಯ ಮೇಲೆ ಸಾಂಪ್ರದಾಯಿಕ ಬಿಳಿ ಟವಲ್ ಕಾಣಿಸದಿರುವುದು ಚರ್ಚೆಗೆ ಕಾರಣವಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ವಿಐಪಿ ಕುರ್ಚಿಗಳ (VIP Chair) ಮೇಲೆ ಬಿಳಿ ಟವಲ್ ಹಾಕುವ ಪದ್ಧತಿಯನ್ನು ಕೈಬಿಡುವಂತೆ ಹವಾಮಾನ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಸೋಷಿಯಲ್ ಮೀಡಿಯಾ ‘ಎಕ್ಸ್’ ಮೂಲಕ ಮುಖ್ಯಮಂತ್ರಿ ವಿಜಯ್ ಅವರಿಗೆ ಮನವಿ ಮಾಡಿದ್ದರು. ಈ ಮನವಿಯ ಒಂದು ದಿನದ ಬಳಿಕ ಬಿಡುಗಡೆಯಾದ ಅಧಿಕೃತ ಸಭೆಯ ಪೋಟೋಗಳಲ್ಲಿ ವಿಜಯ್ ಟವಲ್ ಇಲ್ಲದ ಕುರ್ಚಿಯಲ್ಲಿ ಕುಳಿತಿರುವುದು ಕಂಡುಬಂದಿದೆ.
ಮೇ 14ರಂದು ಸಚಿವಾಲಯದಲ್ಲಿ ನಡೆದ ಕೈಗಾರಿಕೆ, ಹೂಡಿಕೆ ಪ್ರಚಾರ ಮತ್ತು ವಾಣಿಜ್ಯ ಇಲಾಖೆಯ ಪರಿಶೀಲನಾ ಸಭೆಯ ಫೋಟೋಗಳಲ್ಲಿ ವಿಜಯ್ ಅವರ ಕುರ್ಚಿಯ ಮೇಲೆ ಬಿಳಿ ಟವಲ್ ಇತ್ತು. ಆದರೆ ಬಳಿಕ ನಡೆದ ಸಭೆಯಲ್ಲಿ ಟಿಎಎಫ್‌ಇ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್ ಮತ್ತು ಉಪಾಧ್ಯಕ್ಷೆ ಡಾ. ಲಕ್ಷ್ಮಿ ವೇಣು ಅವರೊಂದಿಗಿನ ಚಿತ್ರಗಳಲ್ಲಿ ಟವಲ್ ಕಾಣೆಯಾಗಿತ್ತು.

ಈ ಬದಲಾವಣೆಯನ್ನು ಗಮನಿಸಿದ ಎಕ್ಸ್ ಬಳಕೆದಾರರು ವಿಐಪಿ ಸಂಸ್ಕೃತಿಯಿಂದ ದೂರ ಸಾಗುವ ಸಂಕೇತ ಎಂದು ಬಣ್ಣಿಸಿದ್ದಾರೆ. ಕಂಗುಜಮ್ ಕೂಡ ವಿಜಯ್ ಅವರಿಗೆ ಕೃತಜ್ಞತೆ ಸಲ್ಲಿಸಿ, ಸಾಮಾನ್ಯ ಜನರ ಧ್ವನಿಯನ್ನು ಅವರು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಬಿಳಿ ಟವಲ್ ಸಂಪ್ರದಾಯವು ಬ್ರಿಟಿಷ್ ಕಾಲದಿಂದ ನಡೆದು ಬಂದಿದೆ. ಬಿಸಿಲಿನ ವಾತಾವರಣದಲ್ಲಿ ಬೆವರು ಹೀರಿಕೊಳ್ಳಲು ಹಾಗೂ ಕುರ್ಚಿಗಳನ್ನು ರಕ್ಷಿಸಲು ಇದನ್ನು ಬಳಸಲಾಗುತ್ತಿತ್ತು. ಬಳಿಕ ಇದು ಅಧಿಕಾರ, ಶಿಸ್ತು ಮತ್ತು ವಿಐಪಿ ಸಂಸ್ಕೃತಿಯ ಸಂಕೇತವಾಗಿ ಬದಲಾಗಿತ್ತು.
ಬಿಳಿ ಟವಲ್ ಬಳಕೆ ಯಾಕೆ?
ಬಿಳಿ ಟವಲ್ ಸಂಸ್ಕೃತಿ ಎಂದರೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಚಿವರು ಹಾಗೂ ವಿಐಪಿಗಳ ಕುರ್ಚಿಗಳ ಮೇಲೆ ಬಿಳಿ ಟವಲ್ ಹಾಕುವ ಪದ್ಧತಿ. ಬ್ರಿಟಿಷರ ಕಾಲದಿಂದಲೇ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆರಂಭದಲ್ಲಿ ಬಿಸಿ ಮತ್ತು ಆದ್ರ ವಾತಾವರಣದಲ್ಲಿ ಬೆವರು ಹೀರಿಕೊಳ್ಳಲು, ಕುರ್ಚಿಗಳನ್ನು ಕಲೆ ಮತ್ತು ಸವೆತದಿಂದ ರಕ್ಷಿಸಲು ಬಿಳಿ ಟವಲ್ ಬಳಸಲಾಗುತ್ತಿತ್ತು. ದೀರ್ಘ ಸಮಯ ಕೆಲಸ ಮಾಡುವ ವೇಳೆ ಮುಖ ಮತ್ತು ಕುತ್ತಿಗೆ ಒರೆಸಲು ಸಹ ಇದು ಉಪಯೋಗವಾಗುತ್ತಿತ್ತು. ಆದರೆ ಕಾಲಕ್ರಮೇಣ ಈ ಪದ್ಧತಿ ಕೇವಲ ಸೌಕರ್ಯಕ್ಕೆ ಸೀಮಿತವಾಗದೇ, ಅಧಿಕಾರ, ಹುದ್ದೆ ಮತ್ತು ವಿಐಪಿ ಸಂಸ್ಕೃತಿಯ ಸಂಕೇತವಾಗಿ ರೂಪುಗೊಂಡಿತು. ಸರ್ಕಾರಿ ಕಚೇರಿಗಳಲ್ಲಿ ಬಿಳಿ ಟವಲ್ ಇರುವ ಕುರ್ಚಿಗಳನ್ನು ಉನ್ನತ ಹುದ್ದೆಯ ಅಧಿಕಾರಿಗಳ ಗುರುತಾಗಿ ನೋಡಲಾಗುತ್ತಿತ್ತು.

