ಬೆಂಗಳೂರು: ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದಕ್ಕೆ ಸಚಿವ ಸಾರಾ ಮಹೇಶ್ ಗೆ ಸಿಎಂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿದ ವಿಷಯ ಸುದ್ದಿಯಾಗುತ್ತಿದ್ದಂತೆ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಸಿಎಂ ಅವರು ಸಾರಾ ಮಹೇಶ್ ರನ್ನ ಕರೆಯಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂಬಾಗಿಲಿನಿಂದ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಂದಿದ್ದ ಸಚಿವ ಸಾ.ರಾ ಮಹೇಶ್, ಬಿಜೆಪಿ ನಾಯಕರ ಜೊತೆಗಿನ ಚರ್ಚೆಯ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ಸಭೆ ನಡೆಸಿದ್ದರು. ಸಭೆ ಬಳಿಕ ಸಾರಾ ಮಹೇಶ್ ಅವರು ಕೆಕೆ ಗೆಸ್ಟ್ ಹೌಸ್ ಬಳಿ ಬಿಜೆಪಿ ನಾಯಕರ ಜೊತೆ ಮಾಧ್ಯಮಗಳಿಗೆ ಸೆರೆ ಸಿಕ್ಕಿದ್ದರು. ಈ ಮೂಲಕ ಮೂವರು ನಾಯಕರ ರಹಸ್ಯ ಭೇಟಿ ಬಯಲಾಗಿತ್ತು.
ಇದೀಗ ಈ ರಹಸ್ಯ ಭೇಟಿ ಮೈತ್ರಿ ಪಕ್ಷದ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ವಿಚಾರಕ್ಕೆ ಸಚಿವ ಸಾ ರಾ ಮಹೇಶ್ ರನ್ನ ಕರೆಯಿಸಿ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಅಪರೇಷನ್ ಕಮಲದಿಂದ ಸರ್ಕಾರ ಉಳಿಸಿಕೊಳ್ಳುವ ಸಮಯದಲ್ಲೇ ಜೆಡಿಎಸ್ ಸಚಿವರಿಂದ ಎಡವಟ್ಟಾಗಿದ್ದು, ಸಾ.ರಾ ಮಹೇಶ್ ಅವರ ರಹಸ್ಯ ಭೇಟಿ ಮೈತ್ರಿ ಪಕ್ಷದಲ್ಲಿ ಬಿರುಕು ತರುತ್ತಾ ಎಂಬ ಆತಂಕದಲ್ಲಿ ಸಿಎಂ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.