ಕಿಚ್ಚ ಸುದೀಪ್ (Sudeep) ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡಿದರು. ಬಹಿರಂಗ ಸಭೆ ಹಾಗೂ ರಾಲಿಗಳಲ್ಲೂ ಸುದೀಪ್ ಭಾಗಿಯಾದರು. ನಾನಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಸುದೀಪ್, ವರುಣಾ ಕ್ಷೇತ್ರಕ್ಕೆ ಹೋಗಿರಲಿಲ್ಲ. ಈ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ (Siddaramaiah) ಮೇಲೆ ಗುರುತರ ಆರೋಪ ಮಾಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ ( Varuna Constituency) ಸಿದ್ದರಾಮಯ್ಯನವರು ಗೆಲ್ಲುವುದಕ್ಕಾಗಿ ನಾನಾ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡರು. ತಮ್ಮ ಬಗ್ಗೆ ತೀಕ್ಷ್ಮವಾಗಿ ಪ್ರತಿಕ್ರಿಯೆ ಬಾರದಂತೆ ನೋಡಿಕೊಂಡರು. ಸುದೀಪ್ ಅವರು ವರುಣಾ ಕ್ಷೇತ್ರದ ಪ್ರಚಾರಕ್ಕೆ ಬಾರದಂತೆ ತಡೆಹಿಡಿದರು ಎಂದು ಸಿಂಹ ಆರೋಪಿಸಿದ್ದಾರೆ. ಇದನ್ನೂ ಓದಿ:ಸೋದರಳಿಯನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್ ಬಿಜೆಪಿಗೆ ಬೆಂಬಲಿಸಿದ್ದಕ್ಕಾಗಿ ಅನೇಕರು ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಬಿಜೆಪಿ ಪಕ್ಷದಲ್ಲಿತ್ತು. ಸುದೀಪ್ ಪತ್ರಿಕಾಗೋಷ್ಠಿ ಮಾಡಿ, ತಾವು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. ಜಾತಿ ಲೆಕ್ಕಾಚಾರವನ್ನು ಗಣನೆಗೆ ತಗೆದುಕೊಂಡು ಸುದೀಪ್ ಅವರನ್ನು ಕೆಲ ಕ್ಷೇತ್ರಗಳಿಗೆ ಮಾತ್ರ ಪ್ರಚಾರಕ್ಕೆ ಕಳುಹಿಸಲಾಗಿತ್ತು.
ಜಿದ್ದಾಜಿದ್ದಿನ ಕಣವಾಗಿದ್ದ ವರುಣಾ ಕ್ಷೇತ್ರಕ್ಕೆ ಸುದೀಪ್ ಬರಲಿಲ್ಲ. ಸುದೀಪ್ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಅತ್ತ ಮುಖ ಕೂಡ ಹಾಕಲಿಲ್ಲ. ಇದರ ಹಿಂದೆ ಸಿದ್ದರಾಮಯ್ಯನವರು ಇದ್ದರು ಎಂದು ಸಿಂಹ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಿದ್ದರಾಮಯ್ಯ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು.