ಬೆಂಗಳೂರು: ಗುಜರಾತ್ ನಲ್ಲಿ ಬಿಜೆಪಿಯ ನಾಗಾಲೋಟದ ಓಟಕ್ಕೆ ರಾಜ್ಯ ಕಾಂಗ್ರೆಸ್ ಬೆಚ್ಚಿದ್ದು, ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಆ್ಯಂಡ್ ಟೀಮ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಬಿಜೆಪಿಯನ್ನು ಮಣಿಸಲು ಏಕಕಾಲದಲ್ಲಿ ಬಿಜೆಪಿಯ ಎರಡು ಹಕ್ಕಿಗಳನ್ನು ಹೊಡೆಯಲು ಸಿದ್ದರಾಮಯ್ಯ ಮತ್ತು ಅವರ ತಂಡ ಮುಂದಾಗಿದ್ದು, ಈಶ್ವರಪ್ಪ ಮತ್ತು ಯಡಿಯೂರಪ್ಪ ವಿರುದ್ಧ ಏಕಕಾಲದಲ್ಲಿ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಸಕಲ ತಯಾರಿ ನಡೆದಿದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಪರಿವರ್ತನಾ ರ್‍ಯಾಲಿ ಮುಖಾಂತರ ರಾಜ್ಯ ಸುತ್ತುತ್ತಿರುವ ಯಡಿಯೂರಪ್ಪ ಅವರನ್ನು ಮಣಿಸಲು ಎಲ್ಲಿಯೂ ಸುತ್ತಾಡದಂತೆ ಕಟ್ಟಿಹಾಕಲು ಎಸಿಬಿ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಈಗಾಗಲೇ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ಇನ್ನೊಮ್ಮೆ ದೂರು ಕೊಡಿಸಲು ಚಿಂತನೆ ಮಾಡಿದ್ದು, ಹೊಸ ದೂರುಗಳನ್ನು ಸ್ವೀಕರಿಸಿದ ಕೂಡಲೇ ಎಫ್‍ಐಆರ್ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ದಾಖಲಾಗಿರುವ ಎಫ್‍ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಈಗ ವಕೀಲರು ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಒತ್ತಡ ಹಾಕುತ್ತಿದ್ದು, ತೆರುವುಗೊಳಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಲು ವಕೀಲರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಜೊತೆ ಈಶ್ವರಪ್ಪ ಅವರನ್ನು ಸಹ ಕಟ್ಟಿ ಹಾಕಲು ಚಿಂತನೆ ನಡೆದಿದ್ದು, ಅವರ ವಿರುದ್ಧ ಹೊರಾಡುತ್ತಿರುವ ಶಿವಮೊಗ್ಗದ ವಕೀಲರನ್ನು ಕಾಂಗ್ರೆಸ್ ಶಾಸಕ ಉಗ್ರಪ್ಪ ಸಂಪರ್ಕ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮೇಲಿರುವ ಆರೋಪಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಅಂತಾ ಎನ್ನಲಾಗಿದೆ.