– ಮೈಸೂರಿಗೆ ಮೋದಿ ಆಗಮನದ ಹೊತ್ತಲ್ಲೇ ತವರಲ್ಲಿ ಬಿಜೆಪಿಗೆ ಸಿಎಂ ಮಾಸ್ಟರ್ ಸ್ಟ್ರೋಕ್
ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಲ್ಲಿ ಮೈಸೂರು (Mysuru) ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿರುವಂತೆ ಕಾಣುತ್ತಿದೆ. ರಾಜಕೀಯ ಕಾರಣಕ್ಕೆ 6 ವರ್ಷಗಳಿಂದ ಇದ್ದ ಮುನಿಸನ್ನು ಮರೆತು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (V.Srinivas Prasad) ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
Advertisement
ನಾಳೆ (ಭಾನುವಾರ) ಪ್ರಧಾನಿ ಮೋದಿ ಅವರು ಮೈಸೂರಿಗೆ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಈ ಹೊತ್ತಿನಲ್ಲೇ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಸಿಎಂ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಆರು ವರ್ಷಗಳಿಂದ ದಿಗ್ಗಜ ನಾಯಕರು ಪರಸ್ಪರ ಭೇಟಿಯಾಗಿರಲಿಲ್ಲ. ಮಾತುಕತೆಯೂ ಇರಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಪ್ರಸಾದ್ ಮನೆಗೆ ಸಿದ್ದರಾಮಯ್ಯ (Siddaramaiah) ಅವರು ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು: ಡಿಕೆ ಸುರೇಶ್
Advertisement
Advertisement
ಇದು ಸೌಹಾರ್ದಯುತ ಭೇಟಿಯೋ ಅಥವಾ ರಾಜಕೀಯ ಭೇಟಿಯೋ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಬನ್ರಿ ಪ್ರಸಾದ್ ಎಂದು ಸಿಎಂ ಕುಶಲೋಪರಿ ವಿಚಾರಿಸಿದರು.
Advertisement
ಶ್ರೀನಿವಾಸ ಪ್ರಸಾದ್ ಬಂದ ಕೂಡಲೇ ಸಿಎಂ ಎದ್ದು ನಿಲ್ಲಲು ಮುಂದಾದರು. ಆಗ ಶ್ರೀನಿವಾಸ್ ಪ್ರಸಾದ್, ಬೇಡ ಬೇಡ.. ಕೂತುಕೊಳ್ಳಿ ಎಂದರು. ಈ ವೇಳೆ ಸಿಎಂ ಬಳಿ ಪ್ರಸಾದ್ ಆರೋಗ್ಯ ಸಮಸ್ಯೆ ಹೇಳಿಕೊಂಡರು. ‘ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ’ ಎಂದು ಸಿಎಂ ಸಲಹೆ ನೀಡಿದರು. ಇದನ್ನೂ ಓದಿ: ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?
2013 ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ತಮ್ಮ ಸಂಪುಟದಿಂದ ಕೈಬಿಟ್ಟಿದ್ದರು. ಇದರಿಂದ ಕುಪಿತಗೊಂಡಿದ್ದ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚುನಾವಣೆ ಎದುರಿಸಿದ್ದರು. ಆಗ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ನಂತರ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಸಾದ್ ಗೆಲುವು ಸಾಧಿಸಿದ್ದರು.
ಸಂಪುಟದಿಂದ ಕೈಬಿಟ್ಟಾಗಿನಿಂದ ಸಿದ್ದರಾಮಯ್ಯ ವಿರುದ್ಧ ಪ್ರಸಾದ್ ಅಸಮಾಧಾನ ಹೊಂದಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಪ್ರಸಾದ್ ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿಯಿಂದ ಬಾಲರಾಜ್ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ನಿಂದ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಸ್ಪರ್ಧಿಸಿದ್ದಾರೆ. ಪುತ್ರನ ಗೆಲುವಿಗಾಗಿ ಕ್ಷೇತ್ರದಲ್ಲಿ ಮಹದೇವಪ್ಪ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ರಾಜಕೀಯ ದಾಳ ಉರುಳಿಸಿದ್ದರು.