ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸಿಎಂ ಸಿಎಂ ಸಿದ್ದರಾಮಯ್ಯ (CM Siddaramaiah) ತ್ಯಾಗದ ಮಾತನ್ನು ಆಡಿದ್ದಾರೆ ಎಂಬ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ (KPCC Office) ನಡೆದ ಸಭೆಯಲ್ಲಿ ಕಾಂಗ್ರೆಸ್ಸಿನ ಸಾಕಷ್ಟು ನಾಯಕರು ತ್ಯಾಗ ಮಾಡಿದ್ದಾರೆ ಎಂದು ಮಾತನಾಡುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಇದನ್ನೂ ಓದಿ: ಸುರ್ಜೇವಾಲ ಮಹತ್ವದ ಸಭೆಗೆ ಪರಂ, ರಾಜಣ್ಣ ಗೈರು!
ಸೋನಿಯಾ (Sonia Gandhi), ರಾಹುಲ್ ಗಾಂಧಿ (Rahul Gandhi) ಅವರೇ ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅವರಿಗಿಂತ ನಾವು ದೊಡ್ಡವರಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ನಾವು ಅನಿವಾರ್ಯ ಪರಿಸ್ಥಿತಿ ಬಂದರೆ ತ್ಯಾಗ ಮಾಡಬೇಕಾಗುತ್ತದೆ ಎಂಬ ಅರ್ಥದಲ್ಲಿ ಸಿಎಂ ಮಾತನಾಡಿದ್ದಾರೆ.
ತ್ಯಾಗದ ಮಾತನಾಡುವ ಮೂಲಕ ಒಂದು ರೀತಿಯಲ್ಲಿ ಎಲ್ಲರನ್ನೂ ಸಿಎಂ ಗೊಂದಲದಲ್ಲಿ ಇಟ್ಟಿದ್ದಾರೆ. ಸದ್ಯದ ಪರಿಸ್ಥಿತಿ ತಿಳಿಗೊಳಿಸಲು ತ್ಯಾಗದ ಅಸ್ತ್ರ ಹೂಡಿದ ಸಿಎಂ ತಮ್ಮ ಬೆಂಬಲಿಗರಿಗೂ ಹೆಚ್ಚು ಮಾತನಾಡದಂತೆ ಎಚ್ಚರಿಕೆ ನೀಡಿದಂತಿದೆ.
ಅಗತ್ಯ ಸಂದರ್ಭದಲ್ಲಿ ತ್ಯಾಗಕ್ಕೆ ಸಿದ್ದ ಎಂಬ ಸಂದೇಶದ ಮೂಲಕ ವಿರೋಧಿ ಬಣಕ್ಕೂ ಸಂದೇಶವನ್ನು ರವಾನೆ ಮಾಡಿದ್ದಾರೆ. ತ್ಯಾಗದ ವಿಚಾರದಲ್ಲಿ ಮಾರ್ಮಿಕ ಮಾತನಾಡಿ ಅವರವರ ಲೆಕ್ಕಾಚಾರದ ಪ್ರಕಾರ ಅರ್ಥೈಸಿಕೊಳ್ಳುವಂತೆ ಮಾಡಿ ಸಿದ್ದರಾಮಯ್ಯ ಈಗ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.