– ಇವರು ರಾಮಾಯಣ, ಮಹಾಭಾರತ ಓದಿಲ್ಲ ಎಂದು ಸಿಎಂ ತಿರುಗೇಟು
ಬೆಂಗಳೂರು: ಬಿಜೆಪಿ ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ಇವರು ಜೈ ಶ್ರೀರಾಮ್ ಅಂತಾರೆ, ನಾವು ಜೈ ಸೀತಾರಾಂ ಅಂತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಕುರಿತ ಚರ್ಚೆಯಲ್ಲಿ ಉತ್ತರಿಸಲು ಸಿದ್ದರಾಮಯ್ಯ ಮುಂದಾದರು. ಇದಕ್ಕೆ ಮೈತ್ರಿ ನಾಯಕರು (ಬಿಜೆಪಿ-ಜೆಡಿಎಸ್) ವಿರೋಧ ವ್ಯಕ್ತಪಡಿಸಿದರು. ದೇಶದ್ರೋಹಿಗಳ ರಕ್ಷಣೆ ಮಾಡ್ತಿದೆ ಸರ್ಕಾರ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ವಿಪಕ್ಷಗಳಿಂದ ಆಕ್ರೋಶ ಹೊರಹಾಕಿದವು. ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ವಿಪಕ್ಷಗಳ ನಡೆಗೆ ಸಿಎಂ ಗರಂ ಆದರು. ಇವರಿಗೆ ಕಾಳಜಿ ಇಲ್ಲ, ಜವಾಬ್ದಾರಿ ಇಲ್ಲ. ಬಜೆಟ್ ದಿನ ಹೊರ ಹೋಗಿದ್ದು ಇತಿಹಾಸದಲ್ಲೇ ಇರಲಿಲ್ಲ ಎಂದು ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಬಜೆಟ್ ಕುರಿತು ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವ್ರು ಬಜೆಟ್ ಬಗ್ಗೆ ಟೀಕೆ ಮಾಡಿದ್ದಾರೆ. ಕೇಂದ್ರದ ಬಜೆಟ್ ಸಮರ್ಥಿಸಿಕೊಂಡಿದ್ದಾರೆ. ಅವರ ಟೀಕೆ, ಸಲಹೆ ಸೂಚನೆಗಳಿಗೆ ಸ್ವಾಗತ. ವಿಪಕ್ಷಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ಏನೇನು ಮಾಡಬೇಕೋ ಮಾಡ್ತೀವಿ. ನಾವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಒದಗಿಸಿದ್ದೀವಿ. 1.20 ಲಕ್ಷ ಕೋಟಿ ಹಣ ಅಭಿವೃದ್ಧಿ ಕೆಲಸಗಳಿಗೆ ಕೊಟ್ಟಿದ್ದೀವಿ. ಗ್ಯಾರಂಟಿಗಳಿಗೆ 52,900 ಕೋಟಿ ಇಟ್ಟಿದ್ದೇವೆ. ಇದು ಇನ್ನೂ ಹೆಚ್ಚಾಗಬಹುದು. ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ಆಗಬಹುದು. ವಿಪಕ್ಷಗಳ ಆರೋಪ ಸುಳ್ಳು. ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸ ಕುಂಠಿತ ಆಗಿಲ್ಲ. ಅವರ ಆಪಾದನೆ ಸತ್ಯಕ್ಕೆ ದೂರವಾಗಿದೆ ಎಂದು ಸಿಎಂ ತಿಳಿಸಿದರು. ಸಿಎಂ ಉತ್ತರದ ವೇಳೆ, ಕೋಟಿ ಕೋಟಿ.. ಲೂಟಿ ಲೂಟಿ ಎಂದು ವಿಪಕ್ಷಗಳು ಘೋಷಣೆ ಕೂಗಿದವು.
ಸಿಎಂ ಸಿದ್ದರಾಮಯ್ಯ ಮುಂದುವರಿದು, ಜನ ಬಿಜೆಪಿ ತಿರಸ್ಕರಿಸಿ ನಮಗೆ ಆಶೀರ್ವಾದ ಮಾಡಿದ್ರು. ನಮಗೆ 43%, ಇವರಿಗೆ ಕೇವಲ 36% ಮಾತ್ರ ಮತ ಕೊಟ್ರು. ಇವರು ಹಿಂದೆ ಅಧಿಕಾರದಲ್ಲಿ ಇದ್ದವರು. ಜನ ಇವರ ನಡವಳಿಕೆ ನೋಡಿ, ಇವರ ಲೂಟಿ ನೋಡಿ ತಿರಸ್ಕರಿಸಿದರು. 40% ಭ್ರಷ್ಟಾಚಾರ ನೋಡಿ ಜನ ತಿರಸ್ಕರಿಸಿದರು. 2008 ರಲ್ಲಿ ಇವರು ಗೆದ್ದಿದ್ದು 110 ಸ್ಥಾನ. ನಂತರ ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದ್ರು. ನಾಚಿಕೆ ಆಗಬೇಕು ಇವರಿಗೆ. ಜನ ಇವರಿಗೆ ಯಾವತ್ತೂ ಆಶೀರ್ವಾದ ಮಾಡಿಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
2023-24 ರಲ್ಲಿ ರಾಜ್ಯದ ಜಿಡಿಪಿ 27,67,340 ಕೋಟಿ ಇತ್ತು. ಮುಂದಿನ ವರ್ಷಕ್ಕೆ 28,09630 ಕೋಟಿ ಜಿಡಿಪಿ ಹೆಚ್ಚಾಗಲಿದೆ. ಅಭಿವೃದ್ಧಿಯೂ ಬೆಳೆದಿದೆ, ಜಿಡಿಪಿಯೂ ಬೆಳೆದಿದೆ. ಗ್ಯಾರಂಟಿಗಳಿಗೆ ಮೊದಲ ವರ್ಷ 36 ಸಾವಿರ ಕೋಟಿ ಖರ್ಚು ಮಾಡಿದ್ದೀವಿ. ಮುಂದಿನ ವರ್ಷ 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಇಟ್ಟಿದ್ದೀವಿ. ರಸ್ತೆ, ಶಾಂತಿ ಸುವ್ಯವಸ್ಥೆ ಕಾಪಾಡಲು, ಶಿಕ್ಷಣ, ನೀರಾವರಿ ಎಲ್ಲಕ್ಕೂ ಹಣ ಇಟ್ಟಿದ್ದೀವಿ. ಇವರ ಕಾಲದಲ್ಲಿ ಅಭಿವೃದ್ಧಿ ಮಾಡಲಿಲ್ಲ. ಬರೀ ಲೂಟಿ ಮಾಡಿದ್ರು. ನಾವು ಗ್ಯಾರಂಟಿಗಳಿಗೂ ಹಣ ಇಟ್ಟು ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೀವಿ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ವಾಗ್ದಾಳಿ ನಡೆಸಿದರು. ಸಿಎಂ ಉತ್ತರ ವೇಳೆ, ಬುರುಡೆ ಬುರುಡೆ.. ಸುಳ್ಳು ಸುಳ್ಳು ಅಂತ ಧರಣಿ ನಿರತ ವಿಪಕ್ಷಗಳಿಂದ ಘೋಷಣೆ ಕೂಗಿದವು.
ಸಿಎಂ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಮಾತಾಡಿದ್ರು. ಅವರು ಮಂತ್ರಿ ಆಗಿದ್ದಾಗಲೇ ಮಾತಾಡಿದ್ರು. ಬಿಜೆಪಿ ಅವರ ವಿರುದ್ಧ ಕ್ರಮ ತಗೊಳ್ಳಲಿಲ್ಲ. ಅದರರ್ಥ ಅದು ಬಿಜೆಪಿ ನಿಲುವು ಅಂತ. ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಗೋಡ್ಸೆ ಪೂಜೆ ಮಾಡೋರು ಬಿಜೆಪಿಯವ್ರು. ಗಾಂಧಿ ಕೊಂದವರು ಇವರು. ಸಮಾಜ ಒಡೆಯುವವರು ಎಂದು ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಈ ಜನ ಬಿಜೆಪಿಯವ್ರು ಚುನಾವಣೆಗೆ ಬರಲಿ ಅಂತ ಕಾಯ್ತಿದ್ದಾರೆ. ಸೋಲಿಸಿ ಮನೆಗೆ ಕಳಿಸಲು ಜನ ತಯಾರಾಗಿದ್ದಾರೆ. ಅವರ ಪಕ್ಷದ ಒಬ್ಬರು ಅಡ್ಡ ಮತದಾನ ಮಾಡಿದ್ರು. ಮತ್ತೊಬ್ರು ಬರಲೇ ಇಲ್ಲ. ಅದರಿಂದ ಈ ರೀತಿ ಹುಚ್ಚಾಟ ಮಾಡ್ತಿದ್ದಾರೆ ಎಂದು ಬಿಜೆಪಿಗೆ ಸಿಎಂ ತಿರುಗೇಟು ನೀಡಿದರು. ಈ ವೇಳೆ ಸದನದ ಬಾವಿಯೊಳಗೆ ಬಿಜೆಪಿ-ಜೆಡಿಎಸ್ ಸದಸ್ಯರು ರೌಂಡ್ ಹಾಕಿದರು. ಬಾವಿಯೊಳಗೆ ರೌಂಡ್ ಹಾಕುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಏನಿಲ್ಲ ಏನಿಲ್ಲ.. ಬಜೆಟ್‌ನಲ್ಲಿ ಏನಿಲ್ಲ ಎಂದು ಘೋಷಣೆ ಕೂಗುತ್ತಾ ಧರಣಿ ಮಾಡಿದರು.
ಜೆಡಿಎಸ್‌ನವರಿಗೆ ಠಕ್ಕರ್ ಕೊಟ್ಟ ಸಿಎಂ, ನೀವು ಬಿಜೆಪಿಯವರ ಜೊತೆ ಯಾಕೆ ಹೋಗ್ತಿದ್ದೀರಿ. ನೀವು ಬಿಜೆಪಿಯವರ ಜೊತೆ ಹೋಗೋದಾದರೆ ಜೆಡಿಎಸ್‌ನಲ್ಲಿ ‘ಎಸ್’ ತೆಗೆದು ಹಾಕಿ ಹೋಗಿ. ಕೋಮುವಾದಿ ಪಕ್ಷದ ಜತೆ ಹೋದ್ರೆ ಎಸ್ (ಸೆಕ್ಯುಲರ್) ತೆಗೆದು ಹೋಗಿ ಎಂದು ಹೇಳಿದರು.
ಮೋದಿ ಇಲ್ಲ ಅಂದ್ರೆ ಬಿಜೆಪಿಯವರು ರಾಜಕೀಯವಾಗಿ ಅಶಕ್ತರು. ಬಿಜೆಪಿಯವರ ತಲೆ ಖಾಲಿ ಖಾಲಿ. ರಾಮಾಯಣವೂ ಓದಿಲ್ಲ, ಮಹಾಭಾರತವೂ ಓದಿಲ್ಲ ಇವರು. ಸುಮ್ನೆ ಯಾರೋ ಹೇಳಿದ್ರು ಅಂತ ಮಾತಾಡ್ತಾರೆ ಎಂದ ಸಿಎಂ ‘ಜೈ ಸೀತಾರಾಂ’ ಅಂತ ಘೋಷಣೆ ಕೂಗಿದರು. ಬಿಜೆಪಿಯವರ ‘ಜೈ ಶ್ರೀರಾಮ್’ ಘೋಷಣೆಗೆ ‘ಜೈ ಸೀತಾರಾಂ’ ಎಂದು ಕೂಗಿ ಸಿಎಂ ಠಕ್ಕರ್ ಕೊಟ್ಟರು.
ಸ್ಪೀಕರ್ ಪೀಠದತ್ತ ಧರಣಿ ವೇಳೆ ಪೇಪರ್ ಹರಿದೆಸೆದು ಬಿಜೆಪಿ-ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಿದರು. ಬಿಜೆಪಿ, ಜೆಡಿಎಸ್ ಸದಸ್ಯರ ನಡೆಗೆ ಸ್ಪೀಕರ್ ಗರಂ ಆದರು. ಇದೇನು ಸದನವೋ ನಿಮ್ಹಾನ್ಸೋ ಗೊತ್ತಾಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಈ ವೇಳೆ, ವಿಧಾನಸೌಧ ಉಗ್ರರ ತಾಣ, ಸ್ಲೀಪರ್‌ಗಳ ತಾಣ ಎಂದು ಕೂಗಾಡಿದ ಬಿಜೆಪಿ-ಜೆಡಿಎಸ್ ಸದಸ್ಯರು, ಸಿಎಂ ಉತ್ತರಕ್ಕೆ ಖಂಡನೆ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.