ಬಿಬಿಎಂಪಿ ಆಸ್ತಿಯನ್ನ ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತಾಡ್ತಿದ್ದಾರೆ: ಸಿಎಂ

Public TV
1 Min Read
cm bbmp 12

ಬೆಂಗಳೂರು: ಬಿಬಿಎಂಪಿ ಆಸ್ತಿಯನ್ನು ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶಂಕರಮಠ ವಾರ್ಡ್ ಹಾಗೂ ಮಹಾಲಕ್ಷ್ಮಿ ಲೇಔಟ್‍ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಜಾಸ್ತಿ ಮಾತಾಡುತ್ತಿದ್ದಾರೆಂದು ಬಿಜೆಪಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಅಂತ ನಿತ್ಯ ಸುಳ್ಳು ಹೇಳಿಕೊಂಡು ರಾಜ್ಯಾದ್ಯಂತ ತಿರುಗಾಡುತ್ತಿದ್ದಾರೆ. ಅವರೂ ಕೆಲಸ ಮಾಡಲ್ಲ, ಒಳ್ಳೆ ಕೆಲಸ ಮಾಡೋರಿಗೂ ಅಡ್ಡಗಾಲು ಹಾಕುತ್ತಾರೆ. ಬಿಜೆಪಿಯವರ ಅಧಿಕಾರವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ, ಕಸ ವಿಲೇವಾರಿ, ಒಳಚರಂಡಿ, ರಾಜಕಾಲುವೆ ಅಭಿವೃದ್ಧಿಯನ್ನ ಮಾಡಲಿಲ್ಲ. ಇವತ್ತಿನ ಬೆಂಗಳೂರಿನ ಪರಿಸ್ಥಿತಿಗೆ ಬಿಜೆಪಿಯವರೇ ಕಾರಣವೆಂದು ವಾಗ್ದಾಳಿ ನಡೆಸಿದರು.

ರಾಜಕಾಲುವೆ ಅಭಿವೃದ್ಧಿ ಕೆಲಸ ನಾವು ಮಾಡ್ತಿದ್ದೇವೆ. ಸಾವಿರಾರು ಕೋಟಿ ಬೆಂಗಳೂರು ಅಭಿವೃದ್ದಿಗೆ ನಮ್ಮ ಸರ್ಕಾರದಿಂದ ಹಣ ನೀಡಿದ್ದೇವೆ. ಮುಂದಿನ ಅವಧಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಮುಂದಿನ ಅವಧಿಯಲ್ಲಿ ಎಷ್ಟೇ ಕೋಟಿ ಖರ್ಚು ಆದರೂ ಇಡೀ ಬೆಂಗಳೂರಿಗೆ ವೈಟ್ ಟ್ಯಾಪಿಂಗ್ ರೋಡ್ ಹಾಕಿಸುತ್ತೇನೆಂದು ಸಿಎಂ ಘೋಷಣೆ ಮಾಡಿದರು.

cm bbmp 13

109 ಕೋಟಿ.ರೂ. ವೆಚ್ಚದಲ್ಲಿ, ಉದ್ಯಾನವನದ ಶೆಲ್ಟರ್ ನಿರ್ಮಾಣ, ಈಜುಕೊಳದ ಉನ್ನತೀಕರಣ ಕಾಮಗಾರಿ, ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಪದ್ಮಾವತಿ, ಸಚಿವ ಸೀತಾರಾಂ, ಶಾಸಕರಾದ ಗೋಪಾಲಯ್ಯ, ಮುನಿರತ್ನ ಭಾಗಿಯಾಗಿದ್ದರು.

ಗೋಪಾಲಯ್ಯ ವಾಗ್ದಾಳಿ: ಇವತ್ತು ಬಿಬಿಎಂಪಿ ಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇದೆ. ನಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಿಲ್ಲ. ನಾವು ಅಭಿವೃದ್ಧಿ ಕೆಲಸ ಮಾಡಲು ಹೋದರೆ ಬಿಜೆಪಿಯವರು ವಿನಾಕಾರಣ ವಿರೋಧ ಮಾಡಿ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳಾಗಿಲ್ಲ. ನಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಬಿಜೆಪಿ ವಿರುದ್ಧ ಗೋಪಾಲಯ್ಯ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *