ಹಾವೇರಿ: ಜಾತಿಗಣತಿ ವರದಿಯನ್ನು ಈ ಕೂಡಲೇ ಅಂಗೀಕರಿಸಬೇಕು. ಪ್ರಬಲ ಸಮುದಾಯದ ನಾಯಕರ ಮಾತಿಗೆ ಮಣಿಯದೆ ವರದಿಯನ್ನ ಅಂಗೀಕರಿಸಬೇಕು ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಯಾವುದೇ ನ್ಯೂನತೆಗಳು ಇದ್ದರೆ ಸರಿಪಡಿಸಲು ಸಮಯ ಇದೆ. ಈಗಾಗಲೇ ಜಾತಿಗಣತಿ ಸೋರಿಕೆಯಾಗಿದೆ. ಈಡಿಗ ಸಮುದಾಯದ ಸಂಖ್ಯೆ 15 ಲಕ್ಷ ತೋರಿಸಲಾಗಿದೆ. ರಾಜ್ಯದಲ್ಲಿ ಈಡಿಗ ಸಮುದಾಯದ 50 ಲಕ್ಷ ಜನರು ಇದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಜಾತಿಗಣತಿಯನ್ನ ಮಂಡನೆ ಮಾಡದಿದ್ದರೆ ಅಹಿಂದ ಸಮಾಜಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ. ಈ ವರದಿ ಜಾರಿಗೆ ಮಾಡಲು ಅಲ್ಪಸಂಖ್ಯಾತರು, ಅಹಿಂದ ಸಮಾಜ ನಿಮ್ಮ ಬೆನ್ನಿಗೆ ಇದೆ. ನಿಮ್ಮ ಪಕ್ಷದ ಕೆಲವು ನಾಯಕರು ಪರಿಷ್ಕರಣೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ನೀವು ನಿಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಜಾತಿಗಣತಿಯನ್ನ ಜಾರಿಗೆ ತರುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಆವತ್ತು ನಿಮ್ಮ ನಾಯಕರು ಯಾಕೆ ವಿರೋಧ ಮಾಡಲಿಲ್ಲ? ಈಗ ನಿಮ್ಮ ನಾಯಕರು ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.
- Advertisement3
ರಾಜ್ಯದ ಪ್ರಬಲ ಸಮುದಾಯದ ನಾಯಕರ ನಡುವಳಿಕೆಯಿಂದ ಪರಿಶಿಷ್ಟ ಜಾತಿ-ಪಂಗಡಗಳ ಹಕ್ಕು ಕಸಿಯುವ ಪ್ರಯತ್ನ ಸುಮಾರು ವರ್ಷಗಳಿಂದ ನಡೆಯುತ್ತಿದೆ. ಮುಖ್ಯಮಂತ್ರಿಗಳ ಮೇಲೆ ಈಡಿಗ ಸಮುದಾಯ ಅಪಾರ ನಂಬಿಕೆ ಇಟ್ಟುಕೊಂಡಿದೆ. 17ರಂದು ನಡೆಯುವ ಸಚಿವ ಸಂಪುಟದಲ್ಲಿ ಜಾತಿಗಣತಿಯನ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನ ರಾಜ್ಯದ ಜನರ ಮುಂದೆ ತೆರೆದಿಡಬೇಕು. 2013 ರಲ್ಲಿ ಮಾಡಿದ ವರದಿ ಇದು ಎಂದು ಹಿಂದಕ್ಕೆ ಇಡಬೇಡಿ. 12 ವರ್ಷ ಆಗಿದೆ ಅಂದರೆ, ಹೆಚ್ಚುಕಮ್ಮಿ ಆಗಿದ್ದರೆ ತನಿಖೆ ಮಾಡಿ ತಿದ್ದುಪಡಿ ಮಾಡಬಹುದು. ಯಾವುದೇ ಸ್ವಾಮೀಜಿ, ಪ್ರಬಲ ನಾಯಕರ ಒತ್ತಡಕ್ಕೆ ಮಣಿಯಬಾರದು. ಶೀಘ್ರದಲ್ಲೇ ಜಾತಿಗಣತಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.