ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ದ (Lidkar) ರಾಯಭಾರಿಯಾಗಿ ನಟ ಡಾಲಿ ಧನಂಜಯ್ (Dolly Dhananjay) ಅವರನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah), ನಟ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿ ಘೋಷಿಸಿದರು. ಇದೇ ಮೊದಲ ಬಾರಿಗೆ ಲಿಡ್ಕರ್ ಗೆ ರಾಯಭಾರಿಯನ್ನು ಆಯ್ಕೆ ಮಾಡಿದ್ದು ವಿಶೇಷ.
Advertisement
ಸ್ಯಾಂಡಲ್‌ವುಡ್ ನಲ್ಲಿ ನಟನಾಗಿ ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಚರ್ಮ ಕುಶಲಕರ್ಮಿಗಳ ಕುಟುಂಬದ ನೆರವಿಗೆನಿಂತಿದ್ದಾರೆ.
Advertisement
Advertisement
ವಿಶೇಷ ಎಂದರೆ ಲಿಡ್ಕರ್ ರಾಯಭಾರಿಯಾಗಲು ಧನಂಜಯ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ. ಉಚಿತವಾಗಿ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುವ ಮೂಲಕ ಧನಂಜಯ್ ಮಾದರಿಯಾಗಿದ್ದಾರೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 67ನೇ ಪುಣ್ಯ ಸ್ಮರಣೆ ದಿನವೇ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಧನಂಜಯ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು.
Advertisement
ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ರಾಯಭಾರಿಯನ್ನ ಆಯ್ಕೆ ಮಾಡಿ ಈ ನಿಗಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರಕ್ಕೆ ಡಾಲಿ ರಾಯಾಭಾರಿಯಾಗುವ ಮೂಲಕ ಬಡವರ ಮಕ್ಕಳು ಬೆಳಿಬೇಕು ಎನ್ನುವುದನ್ನು ಮತ್ತೆ ಸಾರಿ ಹೇಳಿದ್ದಾರೆ.
ಘೋಷಣೆ ಬಳಿಕ ಮಾತನಾಡಿದ ಧನಂಜಯ, ‘ಇದರ ಅಡಿ ಐವತ್ತು ಸಾವಿರ ಕುಟುಂಬವಿದೆ. ನಮ್ಮದೇ ಆದ ಬ್ರಾಂಡಿಗೆ ನಾವು ಸಹಾಯ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ಮೇಕ್ ಇನ್ ಕರ್ನಾಟಕ ಆಗಬೇಕು. ಲಿಟ್ಕರ್ ಗೆ ಸಪೋರ್ಟ್ ಮಾಡುವುದರಿಂದ ಅದನ್ನೆ ನಂಬಿಕೊಂಡ ಕುಟುಂಬಗಳಿಗೆ ಸಹಾಯವಾಗಲಿದೆ. ಮೈಸೂರ್ ಸಿಲ್ಕ್ ಹೇಗಿದಿಯೋ ಹಾಗೆ ನಮ್ಮದೆ ಬ್ರ್ಯಾಂಡ್ ಇರಬೇಕು’ ಎಂದರು.
ಸಿಎಂ ಸಿದ್ಧರಾಮಯ್ಯ ಅವರು ಮಾತನಾಡಿ, ‘ಖ್ಯಾತ ನಟ ಡಾಳಿ ಧನಂಜಯ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಇರುವ ನಟ, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಉತ್ತೇಜನ ಆಗುತ್ತೆ’ ಎಂದು ಹೇಳಿದರು. ಬಳಿಕ ಲಿಟ್ಕರ್ ಕೇಂದ್ರಕ್ಕೆ ಭೇಟಿ ನೀಡಿದ ನಟ ಧನಂಜಯ ಅವರಿಗೆ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಧನಂಜಯವರಿಗಾಗಿಯೇ ವಿಶೇಷವಾಗಿ ಚಪ್ಪಲಿಯನ್ನು ತಯಾರಿಸಲಾಗಿತ್ತು. ಡಾಲಿ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜೊತೆ ಮಾತನಾಡಿ ಖುಷಿಪಟ್ಟರು.