– ಕುರುಬರ ಭವನದ ವಾಟರ್ ಬಿಲ್ ಮನ್ನಾ ಮಾಡಲು ಪ್ರಸ್ತಾವನೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಲಾಟರಿ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದ ಅಧಿಕಾರಿಯ ಕೇಡರ್ ಬದಲಾವಣೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‍ಪಿಯಾಗಿರೋ ಎಐಜಿಪಿ ಎಂ.ವಿ ಚಂದ್ರಕಾಂತ್ ಅವರಿಗೆ ಕೆಎಸ್‍ಪಿಎಸ್ ಹುದ್ದೆಯಿಂದ ಕೆಎಎಸ್ ಕಿರಿಯ ಶ್ರೇಣಿ ಹುದ್ದೆ ನೀಡಲು ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ.
1999ರ ಬ್ಯಾಚ್‍ನಲ್ಲಿ ಚಂದ್ರಕಾಂತ್ ಅವರಿಗಿಂತ ಮುಂದೆ ಇದ್ದ ಅಭ್ಯರ್ಥಿ ನಕಲಿ ಜಾತಿ ಪ್ರಮಾಣ ಪತ್ರದ ಆರೋಪದಲ್ಲಿ ಸೇವೆಯಿಂದ ಹೊರಬಂದಿದ್ರು. ಆ ಸ್ಥಾನ ನನಗೆ ಸಿಗಬೇಕು ಅಂತ ಚಂದ್ರಕಾಂತ್ ಪದೇ ಪದೇ ಮನವಿ ಮಾಡಿದ್ದರು. ಆದ್ರೆ ಚಂದ್ರಕಾಂತ್ ಅವರ ಈ ಬದಲಾವಣೆಯನ್ನು ಕೆಪಿಎಸ್‍ಸಿ ಎರಡು ಮೂರು ಬಾರಿ ತಿರಸ್ಕರಿಸಿ ಆ ಜಾಗಕ್ಕೆ ಹೊಸ ಆಯ್ಕೆ ನಡೆಯಬೇಕು ಅಂತ ಹೇಳಿತ್ತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಿದ್ದ ಚಂದ್ರಕಾಂತ್ ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೂ ಪ್ರಯತ್ನ ಮುಂದುವರಿಸಿದ್ದರು. ಆದ್ರೆ ಲಾಟರಿ ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಹಿಂದೇಟು ಹಾಕಿತ್ತು. ಇದೀಗ ಅಧಿವೇಶನ ನಡೆಯುವ ವೇಳೆಯಲ್ಲೇ ಚಂದ್ರಕಾಂತ್ ಅವರ ಕೇಡರ್ ಬದಲಾವಣೆಗೆ ಒಪ್ಪಿಗೆ ಕೊಟ್ಟಿದೆ.
Advertisement
ಚಂದ್ರಕಾಂತ್ ಉದ್ಯೋಗ ಗಿಟ್ಟಿಸಿ ಬರೋಬ್ಬರಿ 18 ವರ್ಷಗಳ ಬಳಿಕ ಕೇಡರ್ ಬದಲಾವಣೆ ಮಾಡಿ ಕೆಎಎಸ್ ಕಿರಿಯ ಶ್ರೇಣಿ ಹುದ್ದೆ ಕೊಟ್ಟಿರೋದು ಎಲ್ಲರ ಹುಬ್ಬೇರಿಸಿದೆ. ಲಾಟರಿ ಹಗರಣದ ವೇಳೆ ಚಂದ್ರಕಾಂತ್ ವಿಚಾರದಲ್ಲಿ ಸ್ವಜಾತಿ ಪ್ರೇಮ ಮೆರೆದ್ರು ಅಂದಾಗ ಸಿಎಂ ಕೆಂಡಾಮಂಡರಲಾಗಿದ್ದರು.
Advertisement
ಇದಲ್ಲದೆ ರೈತರ ಸಾಲ ಮನ್ನಾ ಮಾಡದ ಸಿದ್ದು ಸರ್ಕಾರ, ಕುರುಬ ಸಮುದಾಯ ಭವನದ ಲಕ್ಷ ಲಕ್ಷ ನೀರಿನ ಬಿಲ್ ಮನ್ನಾ ಮಾಡೋದಕ್ಕೆ ಹೊರಟಿದೆ. ಬೆಂಗಳೂರಿನ ಗಾಂಧಿನಗರದ ಕುರುಬ ಭವನದಲ್ಲಿರುವ ಆಸ್ಪತ್ರೆ, ವಸತಿ ಭವನದ ನೀರಿನ ಬಿಲ್ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ವಾಟರ್ ಬೋರ್ಡ್ ನಿರ್ಧರಿಸಿದೆ. ಜೊತೆಗೆ ಗೃಹೇತರ ಬಳಕೆಯ ನೀರಿನ ಸಂಪರ್ಕವನ್ನು ಗೃಹಬಳಕೆಯನ್ನಾಗಿ ಪರಿವರ್ತನೆ ಮಾಡೋದಕ್ಕೆ ರೆಡಿಯಾಗಿದ್ದು, ಈ ಪ್ರಸ್ತಾವನೆಯ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಕುರುಬರ ಸಮುದಾಯ ಭವನದ ನೀರಿನ ಬಿಲ್ ಪಾವತಿ ಮಾಡಿ ದಶಕಗಳೇ ಉರುಳಿವೆ. ಬಾಕಿಯಿರುವ ಬಿಲ್ ಮೇಲಿನ ಬಡ್ಡಿಯೇ 15 ಲಕ್ಷ ರೂಪಾಯಿ. ಈ ಬಡ್ಡಿ ಮೊತ್ತವನ್ನು ಮನ್ನಾ ಮಾಡಲು ಜಲಮಂಡಳಿ ಮುಂದಾಗಿರುವುದು ನಾನಾ ಅನುಮಾನಕ್ಕೆ ಕಾರಣವಾಗಿದೆ. ಈ ರೀತಿ ಮಾಡೋದು ಕಾನೂನು ಉಲ್ಲಂಘನೆ ಎಂದು ನಿವೃತ್ತ ಎಂಜಿನಿಯರ್ ಬಸವರಾಜ್ ಹೇಳಿದ್ದಾರೆ.