ರಾಮನಗರ: ಇಡಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಸಿಎಂ ಲಿಂಗಪ್ಪ ಸಲ್ಲಿಸಿರುವ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇಡಿ ಅಧಿಕಾರಿ ಮೋನಿಕಾ ಶರ್ಮಾ ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವನ್ನು ತಡರಾತ್ರಿಯವರೆಗೂ ಪ್ರಶ್ನೆಗಳನ್ನು ಕೇಳುತ್ತಾ ಮಾನಸಿಕ ಕಿರುಕುಳ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ರಕ್ತದೊತ್ತಡ, ಶುಗರ್ ಸೇರಿದಂತೆ ಬಳಲುತ್ತಿದ್ದಾರೆ. ಆದರೂ ಮೋನಿಕಾ ಶರ್ಮಾ ಅನಾರೋಗ್ಯದ ನಡುವೆಯೂ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನ ಟಾರ್ಗೆಟ್ ಮಾಡಿಕೊಂಡಿದ್ದ ಮೋನಿಕಾ ಶರ್ಮಾ ಮಧ್ಯರಾತ್ರಿಯವರೆಗೂ ವಿಚಾರಣೆ ನೆಪದಲ್ಲಿ ಕಿರುಕುಳ, ಅವಮಾನ ಮತ್ತು ನಿಂದಿಸಿದ್ದಾರೆ ಎಂದು ಸಿಎಂ ಲಿಂಗಪ್ಪ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ರಾತ್ರಿ 10 ಗಂಟೆವರೆಗೆ ಬರಬಹುದೆಂದು ಕಾದೆವು, ಬಂದಿಲ್ಲ- ಡಿಕೆಶಿ ತಾಯಿ ಕಣ್ಣೀರು
ಮೋನಿಕಾ ಉದ್ದೇಶ ಪೂರ್ವಕವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಹಿರಿಯರಿಗೆ ಎಡೆ ಇಡುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಮತಿ ನೀಡಲಿಲ್ಲ. ವಿಚಾರಣೆ ಎಂದು ಹೇಳಿ ಸತತ ಎರಡು ವಾರಗಳ ಕಾಲ ಹಿಂಸೆ ನೀಡಿದ್ದಾರೆ. ಅನಾರೋಗ್ಯದಿಂದ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ದಾಖಲಾದಾಗ ತಾಯಿ, ಸೋದರ ಮತ್ತು ಸಂಬಂಧಿಗಳ ಭೇಟಿಗೆ ಅವಕಾಶ ಕಲ್ಪಿಸಿಲ್ಲ. ಶಿವಕುಮಾರ್ ಅವರಿಗೆ ಚಿಕಿತ್ಸೆ ನೀಡಲು ಫ್ಯಾಮಿಲಿ ಡಾಕ್ಟರ್ ಗೆ ಅನುಮತಿಯನ್ನು ನೀಡಿಲ್ಲ. ಇದನ್ನೂ ಓದಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ- ಡಿಕೆಶಿ ಕಣ್ಣೀರಿಗೆ ಮರುಗಿದ ಶ್ರೀರಾಮುಲು
ಡಿ.ಕೆ.ಶಿವಕುಮಾರ್ ಸಮಾಜದಲ್ಲಿ ಓರ್ವ ಗೌರವಾನ್ವಿತ ಗಣ್ಯ ವ್ಯಕ್ತಿಯಾಗಿದ್ದು, ಮೋನಿಕಾ ಶರ್ಮಾ ನಟೋರಿಯಸ್ ಕ್ರಿಮಿನಲ್ ಮತ್ತು ದೇಶದ್ರೋಹದ ಅಡಿ ಬಂಧಿತ ಆರೋಪಿಗಳ ರೀತಿ ಮಾಜಿ ಸಚಿವರನ್ನು ನಡೆಸಿಕೊಂಡಿರೋದು ಖಂಡನೀಯ. ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಜೊತೆ ಗೌರವಯುತವಾಗಿ ನಡೆದುಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಕನಕಪುರ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಯಾಗಿದ್ದು, ಬಂಧನದಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ತಾಲೂಕು ಮಟ್ಟದ ಅಧಿಕಾರಿಗಳು ಸಭೆಗಳನ್ನು ಪದೇ ಪದೇ ಮುಂದೂಡುವ ಪರಿಸ್ಥಿತಿ ಬಂದಿದೆ. ಕೆಲಸಗಳು ಕುಂಠಿತಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಕುಟುಂಬಸ್ಥರ ಭೇಟಿಗೆ ಅವಕಾಶ ನೀಡದೇ ಮಾನವ ಹಕ್ಕುಗಳು ಮತ್ತು ಸಂವಿಧಾನ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ. ಮೋನಿಕಾ ಅವರ ತಂಡ ನೀಡಿದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಡಿ.ಕೆ.ಶಿವಕುಮಾರ್ ಒಳಗಾಗಿದ್ದಾರೆ. ಇದನ್ನೂ ಓದಿ: ಅಳುವ ಮೂಲಕ ಡಿಕೆಶಿ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ- ಅಶ್ವಥ್ ನಾರಾಯಣ