Bengaluru City
ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್, ಶಿಖಾಗೆ ಸಿಎಂ ಬುದ್ಧಿವಾದ
ಬೆಂಗಳೂರು: ಐಎಎಸ್ ಅಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಅವರಿಗೆ ಸಿಎಂ ಕುಮಾರಸ್ವಾಮಿ ಬುದ್ಧಿವಾದ ಹೇಳಿದ್ದಾರೆ.
ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವ ವಿಚಾರವಾಗಿ ಮಂಗಳವಾರ ಶಿಕ್ಷಣ ಸಚಿವ ಮಹೇಶ್ ಅವರ ಮುಂದೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾದ ಹಿನ್ನೆಲೆಯಲ್ಲಿ ಇಂದು ಸಿಎಂ ಕಚೇರಿಯಲ್ಲಿ ನೂತನ ಕಾಲೇಜು ಪ್ರಾರಂಭ ಕುರಿತು ಸಭೆ ನಡೆಯಿತು. ಈ ಸಭೆಗೆ ಶಾಲಿನಿ ರಜನೀಶ್ ಹಾಗೂ ನಿರ್ದೇಶಕಿ ಶಿಖಾ ಅವರು ಆಗಮಿಸಿದರು. ಸಭೆ ಬಳಿಕ ಇಬ್ಬರಿಗೂ ಸಿಎಂ ಬುದ್ಧಿವಾದ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮಗಳ ಮುಂದೆ ಮುಂದೆ ಹೀಗೆ ಅಸಮಾಧಾನ ತೋರಿಸಿಕೊಳ್ಳಬೇಡಿ. ಏನೇ ಇದ್ದರೂ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಅಧಿಕಾರಿಗಳು ಹೀಗೆ ಮಾಡಿದರೆ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ನಿಯಮದ ಪ್ರಕಾರ ಅಧಿಕಾರಿಗಳು ನಡೆದುಕೊಳ್ಳಿ ಅಂತ ಸೂಚನೆ ನೀಡಿದರು. ಇದನ್ನು ಓದಿ: ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಐಎಎಸ್ ಅಧಿಕಾರಿಗಳ ಕಿತ್ತಾಟ!- ವಿಡಿಯೋ ನೋಡಿ
ಖಾಸಗಿ ಕಾಲೇಜುಗಳಿಗೆ ನಿಯಮ ಮೀರಿ ಅನುಮತಿ ನೀಡಿರುವ ಶಾಲಿನಿ ರಜನೀಶ್ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ, ನಿಯಮ ಮೀರಿ ಯಾವುದೇ ಕೆಲಸ ಮಾಡಬೇಡಿ. ಪಿಯು ಬೋರ್ಡ್ ನಿರ್ದೇಶಕರು ತಿರಸ್ಕರಿಸಿದ ಕಾಲೇಜುಗಳಿಗೆ ಹೇಗೆ ಅನುಮತಿ ನೀಡಿದ್ರಿ. ಇದು ಸರಿಯಲ್ಲ ಅಂತ ಸಿಎಂ ಶಾಲಿನಿ ರಜನೀಶ್ ಅವರಿಗೆ ಕ್ಲಾಸ್ ತಗೊಂಡಿದ್ದಾರೆ ಎಂದು ತಿಳಿದುಬಂದಿದೆ.