ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲದೇ ಇನ್ನು ಮುಂದೆ ಪ್ರತಿ ತಿಂಗಳು ಒಂದೊಂದು ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಬಳಿಕ ಮುಂದಿನ ತಿಂಗಳು ರೈತರ ಬೃಹತ್ ಸಮಾವೇಶ ಆಯೋಜಿಸಿ ಋಣ ಪತ್ರ ಹಂಚಿಕೆ ಮಾಡುತ್ತೇನೆ. ಅದಕ್ಕೆ ಪೂರಕವಾದ ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಇದರಿಂದ ದೀಪಾವಳಿ ಮಾತ್ರವಲ್ಲದೇ ಪ್ರತಿ ತಿಂಗಳು ಸಿಹಿ ಸುದ್ದಿ ನೀಡುತ್ತೇನೆ ಎಂದು ನಗರದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ರೈತರ ಸಾಲ ಮನ್ನಾ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಅಂತ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ರೈತರ ಸಾಲ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಇಲ್ಲದೆ ಫಜೀತಿಯಾಗಬಾರದು. ಬಜೆಟ್ ನಲ್ಲಿ ಇದಕ್ಕೆ ಅಂತಾನೇ ಹಣವನ್ನ ಮೀಸಲಿಟ್ಟಿದ್ದೇನೆ. 43 ಸಾವಿರ ಕೋಟಿ ಸಣ್ಣ ಮೊತ್ತ ಅಲ್ಲ. ಮಾಹಿತಿ ಕೊಟ್ಟಿರುವ ರೈತರ ವಿವರವನ್ನ ಉಸ್ತುವಾರಿ ಸಮಿತಿಗೆ ಕಳುಹಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ 10 ಲಕ್ಷ ರೈತರನ್ನೊಳಗೊಂಡ ಬೃಹತ್ ಸಮಾವೇಶ ಮಾಡುತ್ತೇನೆ. ಸಮಾವೇಶ ಮಾಡಿ ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡುತ್ತೇನೆ ಅಂತ ಸಿಎಂ ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ಐದು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಈ ವೇಳೆ ರಾಜ್ಯದ ಜನರಿಗೆ ಪ್ರತಿ ತಿಂಗಳ ಒಂದೊಂದು ಸಿಹಿ ಸುದ್ದಿ ನೀಡುತ್ತೇನೆ ಎಂದು ಬಹಿರಂಗವಾಗಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಹೇಳಿಕೆಯಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದ್ಯಾ? ಇಲ್ಲವೋ ಎನ್ನುವ ಗೊಂದಲ ಈಗ ಎದ್ದಿದೆ. ಹೀಗಾಗಿ ಚುನಾವಣೆ ಆಯೋಗ ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv