– ನಾನು, ಜಿ.ಪರಮೇಶ್ವರ್ ಹಕ್ಕ-ಬುಕ್ಕರು ಇದ್ದಂತೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಸುಳ್ಳುಗಾರ. ಇಂತಹ ವ್ಯಕ್ತಿ ದೇಶದಲ್ಲಿ ಎಲ್ಲಿಯೂ ಸಿಗುವುದಿಲ್ಲ. ನೀವು ನಿಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ಬರಬಹುದು. ಆದ್ರೆ ಪ್ರಧಾನಿ ಮನೆಗೆ ಹೋಗಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಕುದುರೆಗೆರೆ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರವು ನರೇಗಾ ಹಣ ಬಿಡುಗಡೆ ಮಾಡಿಲ್ಲ. ಪ್ರಧಾನಿ ಮೋದಿ ಅವರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ಬಣ್ಣದ ಮಾತನ್ನು ನಂಬಬೇಡಿ. ನಿಮ್ಮ ಜೊತೆ ನಾವು ಇರುತ್ತೇವೆ. ನೀವು ಯಾವಾಗ ಬೇಕಾದರೂ ನಮ್ಮ ಮನೆ ಬಾಗಿಲಿಗೆ ಬನ್ನಿ. ಆದ್ರೆ ನಿಮಗೆ ಪ್ರಧಾನಿ ಮೋದಿ ಮನೆಗೆ ಹೋಗುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ರು.
Advertisement
Advertisement
ನಾನು ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹಕ್ಕ-ಬುಕ್ಕರು ಇದ್ದಂತೆ. ವಿಜಯನಗರ ಸಾಮ್ರಾಜ್ಯದ ಅಭಿವೃದ್ಧಿಗೆ ಹಕ್ಕ-ಬುಕ್ಕರು ಹೇಗೆ ಕೆಲಸ ಮಾಡಿದ್ದಾರೋ, ಅವರಂತೆ ರಾಜ್ಯದ ಅಭಿವೃದ್ಧಿಗೆ ನಾನು ಪರಮೇಶ್ವರ್ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Advertisement
ಸುಲಭ ದರದ ಮನೆಗಳು ಬಡವರಿಗೆ ನೀಡುವ ನಿಟ್ಟಿನಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರವು 1 ಲಕ್ಷ ಮನೆ ಕಟ್ಟುವ ಯೋಜನೆ ಘೋಷಣೆ ಮಾಡಿತ್ತು. ಆ ಯೋಜನೆಗೆ ಇಂದು ಶಂಕುಸ್ಥಾಪನೆ ಮಾಡಿದ್ದೇವೆ. ಈ ಫಲಾನುಭವಿಗಳ ಮನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಾಣವಾಗುತ್ತವೆ ಎಂದು ತಿಳಿಸಿದರು.
Advertisement
ಗುಣಾತ್ಮಕ ಮನೆ 6-8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತದೆ. ಈ ಯೋಜನೆಯಿಂದ ಕಡು ಬಡವರಿಗೆ ಹೆಚ್ಚು ಅನುಕೂಲವಾಗಲಿದೆ. ಹಿಂದಿನ ಸರ್ಕಾರದಲ್ಲಿ ಜಿ+3 ಯೋಜನೆ ಇತ್ತು. ಆದರೆ ಈಗ ಎಸ್+14 ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿದ್ದೇವೆ. ಖಾಸಗಿಯವರಿಗಿಂತ ಉತ್ತಮ ಮನೆ ನಿರ್ಮಾಣ ಮಾಡಿಕೊಡುತ್ತೇವೆ. ಈ ಯೋಜನೆಯ ಬಗ್ಗೆ ಯಾರೂ ಅನುಮಾನಪಡುವುದು ಬೇಡ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕೊಡುತ್ತಿದ್ದೇವೆ. ಕನಿಷ್ಠ 2 ಲಕ್ಷ ಮನೆಗಳ ನಿರ್ಮಾಣದ ಗುರಿಯನ್ನು ಸರ್ಕಾರ ಹೊಂದಿದ್ದು, ಪ್ರಾರಂಭದಲ್ಲಿ 50 ಸಾವಿರ ಮನೆ ನಿರ್ಮಾಣ ಮಾಡುತ್ತೇವೆ. ನಂತರ ಹಂತ ಹಂತವಾಗಿ ಮನೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ 1 ಲಕ್ಷ ಕೋಟಿ ರೂ. ಹಣವನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ರೈತರ ಸಾಲಮನ್ನಾ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ರಾಜ್ಯ ಸರ್ಕಾರವು ಈಗಾಗಲೇ 11 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವ ಹಣ ಬಿಡುಗಡೆ ಮಾಡಿದ್ದು, 14 ಲಕ್ಷ ರೈತರಿಗೆ ಅನುಕೂಲವಾಗಿದೆ. ಈ ವರ್ಷದ ಅಂತ್ಯದಲ್ಲಿ ಎಲ್ಲ ರೈತರ ಸಾಲಮನ್ನಾ ಮಾಡುತ್ತೇವೆ ಎಂದರು.
ರೈತರ ಬ್ಯಾಂಕ್ ಖಾತೆಗೆ ಹಣ ಹಾಕುವುದು ಮೋಸದ ಕಾರ್ಯಕ್ರಮವಾಗಿದೆ. ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 2 ಲಕ್ಷ ರೈತರ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇವೆ. ಅವರಲ್ಲಿ 14 ಜನರನ್ನು ಮಾತ್ರ ಗುರುತಿಸಿ, ಇಬ್ಬರ ಬ್ಯಾಂಕ್ ಖಾತೆಗೆ ಕೇವಲ 900 ರೂಪಾಯಿ ಹಾಕಿದ್ದಾರೆ ಎಂದು ಆರೋಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv