ಮಡಿಕೇರಿ: ತಲಕಾವೇರಿಗೆ ಬಂದು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ ಎಂದು ಸಿಎಂ ಕುಮಾರಸ್ವಾಮಿ ತಲಕಾವೇರಿಯ ಭೇಟಿ ವೇಳೆ ಹೇಳಿದ್ದಾರೆ.
ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ, ನಾನು ಮೊದಲಿನಿಂದಲೂ ಯಾವುದೇ ಮೂಢನಂಬಿಕೆ ಆಚರಿಸಿಕೊಂಡು ಬಂದಿಲ್ಲ. ದೇವರ ಅನುಗ್ರಹದಲ್ಲಿರಬೇಕು. ಮೂಢ ನಂಬಿಕೆಗಳು ನಾವು ಕ್ರಿಯೇಟ್ ಮಾಡಿಕೊಂಡಿರುವುದು. ಒಂದು ವಿಶ್ವಾಸ ಅಷ್ಟೇ. ಆದರೆ ನಾನು ನಾಡಿನ ಜನತೆಗೆ ಸುಭೀಕ್ಷೆ ನೀಡುವಂತೆ ಪ್ರಾರ್ಥಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
Advertisement
Advertisement
19 ವರ್ಷಗಳ ಬಳಿಕ ನಾನು ತಲಕಾವೇರಿಗೆ ಭೇಟಿ ನೀಡಿದ್ದೇನೆ. ಆದರೆ ಈ ಹಿಂದೆ ಜೆಎಚ್ ಪಟೇಲರು ತಲಕಾವೇರಿಗೆ ಆಗಮಿಸಿದ ಕಾರಣ ಸಿಎಂ ಪದವಿ ಕಳೆದುಕೊಂಡಿದ್ದಾರೆ ಎಂದು ಬಿಂಬಿಸಲಾಗಿದೆ. ಅದೇನೋ ಒಂದು ಕಾಕತಾಳೀಯ ಇರುತ್ತೆ, ಅದನ್ನೇ ಎಲ್ಲರಿಗೂ ಅನ್ವಯಿಸುತ್ತದೆ ಎಂಬ ಭಾವನೆ ಸರಿಯಲ್ಲ. ನನ್ನಲ್ಲಿ ಅಂತಹ ಯಾವುದೇ ಭಾವನೆ ಇಲ್ಲ. ಬಹುಮುಖ್ಯವಾಗಿ ತಲಕಾವೇರಿ ತಾಯಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಸಮಸ್ಯೆಗೆ ಪರಿಹಾರ ನೀಡಿದ್ದಾಳೆ. ನ್ಯಾಯಾಲಯದ ತೀರ್ಪಿಗಿಂತ ಕಾವೇರಿ ತಾಯಿ ನೀಡುವ ತೀರ್ಪು ದೊಡ್ಡದು. ದೇವರು ನಾಡಿನ ಜನತೆಗೆ ಸಂಪೂರ್ಣ ಅನುಗ್ರಹ ಕೊಡಬೇಕು. ನಾವೆಲ್ಲ ಮಾನವರು ಭಯ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಬೇಕು. 4 ಜಲಾಶಯಗಳಿಗೂ ತೆರಳಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
Advertisement
ನಾಡಿನ ರೈತರು ಸುಖ ಶಾಂತಿ ನೆಮ್ಮದಿಯಿಂದ ಬದುಕಬೇಕು. ರೈತರು, ಬೆಳೆಗಾರರು ನೆಮ್ಮದಿಯಿಂದ ಇರಲು ಪ್ರಕೃತಿ ಸಹಕಾರ ಮುಖ್ಯ. ಗುರುವಾರ ಹಾರಂಗಿಯಲ್ಲಿ ಬಾಗಿನ ಅರ್ಪಿಸಿದ್ದೇನೆ, ಇಂದು ಭಾಗಮಂಡಲ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ್ದೇನೆ. ಉತ್ತರ ಕರ್ನಾಟಕ ಭಾಗದ ಜಲಾಶಯಗಳು ಭರ್ತಿಯಾಗಿವೆ. ಆ ಭಾಗಕ್ಕೂ ಭೇಟಿ ನೀಡಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಶಿರೂರು ಶ್ರೀ ಗಳ ಆಕಾಲಿಕ ಸಾವಿನ ವಿಚಾರವಾಗಿ ತನಿಖೆ ನಡೆಯುತ್ತಿರುವುದರಿಂದ ಈಗ ಮಾತನಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.