ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೆಸಾರ್ಟಿಗೂ ಹೋಗುವ ಮುನ್ನ ರಾಜಗುರು ದ್ವಾರಕಾನಾಥ್ ಮನೆಗೆ ಭೇಟಿ ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ಹೊಸ ಐಬಿ ರಿಪೋರ್ಟ್ ಬಂದ ಬಳಿಕ ಟೆನ್ಶನ್ ಮಾಡಿಕೊಂಡು ಪುತ್ರ ನಿಖಿಲ್ ಕುಮಾರಸ್ವಾಮಿ ಬಗ್ಗೆ ಕೇಳಲು ರಾಜಗುರು ಮನೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಪೊಲೀಸರು ಯಾವುದೇ ದೃಶ್ಯಗಳನ್ನು ಸೆರೆ ಹಿಡಿಯದಂತೆ ಮಾಧ್ಯಮದವರಿಗೆ ಅಡ್ಡಿ ಉಂಟು ಮಾಡಿದ್ದಾರೆ.
ಮಾಧ್ಯಮದವರಿಗೆ ಮಾತ್ರವಲ್ಲದೇ ಜನರನ್ನು ಕೂಡ ರಾಜಗುರುವಿನ ಮನೆಯ ಅಕ್ಕಪಕ್ಕ ಓಡಾಡುವುದಕ್ಕೆ ನಿರ್ಬಂಧ ಮಾಡಲಾಗಿದೆ. ವಾಹನಗಳು ಬರದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಶುಭ ಶುಕ್ರವಾರ ದ್ವಾರಕನಾಥ್ ಗುರುಗಳ ನಿವಾಸದಲ್ಲಿ ಪೂಜೆ ಇರುತ್ತದೆ. ಈ ಪೂಜೆಗೆ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಉಡುಪಿಯ ಕಾಪು ತಾಲೂಕು ಮೂಳೂರಿನ ಸಾಯಿರಾಧಾ ರೆಸಾರ್ಟ್ ನಲ್ಲಿ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು. ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆ ಸಂದರ್ಭದಲ್ಲಿ ತೆರಳಿದ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಹಾಪೂಜೆಗೆ ಕೊಟ್ಟ ಹಣ್ಣುಕಾಯಿ ತಟ್ಟೆಯಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಕೊಟ್ಟಿದ್ದಾರೆ.
ದೇವಿಯ ಮುಂದಿಟ್ಟು ಆಮಂತ್ರಣ ಪತ್ರಿಕೆಗೆ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ದೇವೇಗೌಡರ ಪುತ್ರಿ ಶೈಲಜ ಅವರ ಮಗ ಡಾ.ಅಮೋಗ್ ಅವರ ಮದುವೆ ಪತ್ರಿಕೆ ಇದಾಗಿದ್ದು, ಭೇಟಿ ಕೊಟ್ಟ ಕ್ಷೇತ್ರದಲ್ಲಿ ಅಜ್ಜ ಮೊಮ್ಮಗನಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಮೇ 16ರ ವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ ಉಡುಪಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡಲಿದ್ದಾರೆ.