ಬೆಂಗಳೂರು: ಕೊಲೆ ಮಾಡಲು ಪೊಲೀಸರೇ ಸುಪಾರಿ ತೆಗೆದುಕೊಳ್ಳುತ್ತಾರಾ? ಕರ್ನಾಟಕ ಪೊಲೀಸ್ ಎಂದರೆ ಎಷ್ಟು ಮರ್ಯಾದೆ ಇತ್ತು. ಆದರೆ ಪೊಲೀಸ್ ಇಲಾಖೆಯ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ರಾಜ್ಯ ಪೊಲೀಸ್ ಇಲಾಖೆಯ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಈ ವೇಳೆ ರಾಜ್ಯದಲ್ಲಿ ನಡೆದಿರುವ ಕೆಲ ಘಟನೆಗಳನ್ನು ಉದಾಹರಿಸಿದ ಸಿಎಂ ಈ ಕುರಿತು ಮಾಹಿತಿ ನೀಡುವಂತೆ ಐಜಿಪಿ ರಾಮಚಂದ್ರರಾವ್ ಸೇರಿದಂತೆ ಇತರೇ ಅಧಿಕಾರಿಗಳನ್ನು ಪ್ರಶ್ನಿಸಿದರು.
Advertisement
Advertisement
ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಡಿಸಿಎಂ ಹಾಗೂ ಗೃಹಸಚಿವ ಪರಮೇಶ್ವರ್, ಡಿಜಿ ಐಜಿಪಿ ನೀಲಮಣಿರಾಜು ಸೇರಿದಂತೆ ಎಲ್ಲಾ ಐಪಿಎಸ್ ಅಧಿಕಾರಿಗಳು, ಎಡಿಜಿಪಿಗಳು, ಐಜಿಪಿಗಳು, ಡಿಐಜಿಗಳು ಭಾಗವಹಿಸಿದ್ದರು.
Advertisement
ಸಭೆಯಲ್ಲಿ ಮುಖ್ಯವಾಗಿ ಕಾನೂನು ಸುವ್ಯವಸ್ಥೆ, ಗೌರಿಲಂಕೇಶ್ ಹತ್ಯೆ ಪ್ರಕರಣ, ಭೀಮಾತೀರದ ನಕಲಿ ಎನ್ ಕೌಂಟರ್ ನಲ್ಲಿ ಪೊಲೀಸರ ಭಾಗಿ ಕುರಿತಂತೆ ಚರ್ಚೆ ನಡೆಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಬೆಂಗಳೂರು ನಗರದ ಅಪರಾಧ ಪ್ರಕರಣಗಳು, ಅಕ್ರಮ ಲೈವ್ ಬ್ಯಾಂಡ್ ಗಳ ಬಗ್ಗೆ ಚರ್ಚೆ ನಡೆಸಿದ ಅವರು ರಾಜಧಾನಿಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದರು.
Advertisement
ಮುಲಾಜಿಲ್ಲದೆ ಕಾರ್ಯನಿರ್ವಹಿಸಿ:
ಇದೇ ವೇಳೆ ಪೊಲೀಸರ ಮೇಲೆ ಉಂಟಾಗುವ ಒತ್ತಡದ ಕುರಿತು ಮಾತನಾಡಿದ ಸಿಎಂ, ಸಮ್ಮಿಶ್ರ ಸರ್ಕಾರ ನಿಮಗೆ ಸಾಕಷ್ಟು ಒತ್ತಡ ಆಗಬಹುದು. ಒತ್ತಡ ಸಹಿಸಿಕೊಂಡು ಕೆಲಸ ಮಾಡಬೇಕು. ಆದರೆ ಯಾರ ಒತ್ತಡ ಹಾಗೂ ಮುಲಾಜಿಗೂ ಒಳಗಾಗುವ ಅಗತ್ಯ ಇಲ್ಲ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದ ಸಲಹೆ ನೀಡಿದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳು 2017-18 ರ ಅವಧಿಯ ಕಾನೂನು ಸುವ್ಯವಸ್ಥೆ ವರದಿ ಮತ್ತು 2018ರ ಉಂಟಾಗಬಹುದಾದ ಕಾನೂನು ಸುವ್ಯವಸ್ಥೆಯ ನಿರೀಕ್ಷಿತ ವಿವರಗಳು ಸೇರಿದಂತೆ ಕಳೆದ ಮೂರು ವರ್ಷಗಳಿಂದ ಗೂಂಡಾ ಆಕ್ಟ್ ನಲ್ಲಿ ದಾಖಲಿಸಿರುವ ಪ್ರಕರಣಗಳ ವಿವರ, ರೌಡಿ ಮತ್ತು ಕೊಮುಗಲಭೆಗೆ ಸಂಬಂಧಪಟ್ಟ ಪ್ರಕರಣಗಳಿಗೆ ಕೈಗೊಂಡ ಕ್ರಮಗಳು, ಮೂರು ವರ್ಷಗಳ ಅವಧಿಯಲ್ಲಿ ಪತ್ತೆ ಹಚ್ಚಿರುವ ಪ್ರಮುಖ ಕೇಸ್ ಗಳ ವಿವರ ಮತ್ತು ಶಿಕ್ಷೆಯಾಗಿರುವ ಕೇಸ್ ಗಳು, ಪ್ರಕರಣ ಪ್ರಮಾಣವನ್ನು ವಿವರವಾಗಿ ಮಾಹಿತಿ ನೀಡಿದರು.
ಸದ್ದು ಮಾಡಿದ ಫೇಕ್ ಎನ್ ಕೌಂಟರ್: ಸಭೆಯಲ್ಲಿ ಪ್ರಮುಖವಾಗಿ ಸಿಎಂ ಕುಮಾರಸ್ವಾಮಿ ಅವರು ಚಡಚಣದಲ್ಲಿ ಪೊಲೀಸ್ ಅಧಿಕಾರಿಗಳೇ ಮಾಡಿದ್ದ ಫೇಕ್ ಎನ್ ಕೌಂಟರ್ ಕುರಿತು ಪ್ರಸ್ತಾಪ ಮಾಡಿ ಪ್ರಶ್ನಿಸಿದರು. ಈ ಕುರಿತು ಐಜಿಪಿ ರಾಮಚಂದ್ರರಾವ್ ಅವರಿಗೆ ಪ್ರಶ್ನೆ ಕೇಳಿದ ಕುಮಾರಸ್ವಾಮಿ ಅವರು, ಪೊಲೀಸರೇ ಕೊಲೆ ಮಾಡಲು ಸುಪಾರಿ ಪಡೆಯುತ್ತರಾ ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ಅವರ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ಒದ್ದಾಡಿದರು. ಇದರಿಂದ ಮತ್ತಷ್ಟು ಗರಂ ಆದ ಸಿಎಂ ಕರ್ನಾಟಕ ಪೊಲೀಸ್ ಎಂದರೆ ಎಷ್ಟು ಮರ್ಯಾದೆ ಇತ್ತು. ಪೊಲೀಸ್ ಇಲಾಖೆಯ ಮರ್ಯಾದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ. ಒಬ್ಬ ಕೊಲೆಗಾರ ಪೊಲೀಸರಿಗೆ ಮತ್ತೊಂದು ಕೊಲೆ ಮಾಡಲು ಸುಪಾರಿ ನೀಡುತ್ತಾನೆ ಅಂದರೆ ನೀವೆಷ್ಟು ಬಲಿಷ್ಟರು ಎನ್ನುವುದು ತಿಳಿಯುತ್ತದೆ ಎಂದು ಪ್ರಶ್ನಿಸಿದರು.
https://www.youtube.com/watch?v=DCrqEmuo20U
https://www.youtube.com/watch?v=Gm3fMTv5no4