ನನ್ನ ಸುದ್ದಿಗೆ ಬರಬೇಡಿ ಹುಷಾರ್ – ಪಬ್ಲಿಕ್ ಟಿವಿ ಮೇಲೆ ಧಮ್ಕಿ, ಕೇಸ್ ಹಾಕ್ತಾರಂತೆ ಸಿಎಂ!

Public TV
3 Min Read
CM HDK PUBLIC TV

ಬೆಂಗಳೂರು: ಬಳ್ಳಾರಿಯ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಸುಳ್ಳು ಕೇಸ್ ಹಾಕಿರುವ ಸಮ್ಮಿಶ್ರ ಸರ್ಕಾರ ಈಗ ವಾಹಿನಿಯ ಮೇಲೆ ಧಮ್ಕಿ ಹಾಕಿದೆ. ಸಿಎಂ ಕುಮಾರಸ್ವಾಮಿ ಅವರು ನನ್ನ ಸುದ್ದಿಗೆ ಬರಬೇಡಿ ಹುಷಾರ್ ಎಂದು ಪಬ್ಲಿಕ್ ಟಿವಿಗೆ ಧಮ್ಕಿ ಹಾಕಿದ್ದಾರೆ.

ಬಳ್ಳಾರಿ ಕೃಷ್ಣದೇವರಾಯ ವಿವಿ ಬೋಧಕೇತರ ಸಿಬ್ಬಂದಿಯ ನೇಮಕ ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಸುದ್ದಿ ಪ್ರಸಾರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಪಬ್ಲಿಕ್ ಟಿವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅರಮನೆ ಮೈದಾನದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪಬ್ಲಿಕ್ ಟಿವಿಯ ಮುಖ್ಯಸ್ಥ ರಂಗನಾಥ್ ಅವರು ತಾನು ಬಿಟ್ಟು ಒಳ್ಳೆಯವರು ರಾಜ್ಯದಲ್ಲಿ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ನಿನ್ನೆಯಿಂದ ಅವರು ವಾರ್ ಶುರು ಮಾಡಿದ್ದಾರೆ. ಆದರೆ ಅವರ ಮಾತಿನ ಮೇಲೆ ನಿಗಾ ಇರಲಿ, ನಾವು ಅನ್ನ ತಿನ್ನೋದು, ಮಣ್ಣು ತಿನ್ನುವುದಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಕರಣದ ವಿವಿಯ ವಿಸಿಗಳು ರಾಜ್ಯಪಾಲರ ಅಡಿಯಲ್ಲಿ ಬರುತ್ತಾರೆ. ವಿವಿ ನಿಯಮಗಳಂತೆ ಪರೀಕ್ಷೆ ಕರೆದಿದ್ದು, ಅದರಂತೆ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ್ದು, ಪರೀಕ್ಷೆ ತೆಗೆದುಕೊಂಡಿದ್ದ ಅಭ್ಯರ್ಥಿ ಪರೀಕ್ಷೆಯನ್ನೇ ಬರೆದಿಲ್ಲ. ಈ ಬಗ್ಗೆ ವರದಿಯನ್ನು ಮಾಡಿದವರ ವಿರುದ್ಧ ದೂರು ದಾಖಲಾಗಿದೆ. ಆದರೆ ರಾಜ್ಯದಲ್ಲಿ ಪತ್ರಿಕಾ ಧರ್ಮದ ಮೇಲೆ ಬಲ ಪ್ರಯೋಗ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ನನ್ನ ಮೇಲೆ ಗದಾಪ್ರಹಾರ ಮಾಡುತ್ತೀರಾ? ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿ ಬಂದವರ ಕುಟುಂಬದಲ್ಲಿ ಹುಟ್ಟಿದವನು ನಾನು. ಇದಕ್ಕೆ ನಾನು ಹೆದರುವುದಿಲ್ಲ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ರೌಡಿಶೀಟರ್ ಇಟ್ಟುಕೊಂಡು ಪಬ್ಲಿಕ್ ಟಿವಿ ನಡೆಸುತ್ತಿದ್ದೀರಾ? ನಾನು ನಿಮ್ಮ ವಿರುದ್ಧ ಚಾಲೆಂಜ್ ತಗೊಂಡಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನಿಮ್ಮ ಕೆಲಸವನ್ನು ಕಾನೂನು ವ್ಯಾಪ್ತಿಯಲ್ಲಿ ಈಡೇರಿಸಬೇಕು. ಇಲ್ಲ ಅಂದ್ರೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಿದರು.

bly vv 1

ಕ್ಯಾಮೆರಾ ಮುಂದೆ ಕುಳಿತು ಮಾತನಾಡುವುದು ಬೇರೆ, ಸಾರ್ವಜನಿಕವಾಗಿ ಜನರ ಮುಂದೇ ನಿಂತು ಮಾತನಾಡುವುದು ಬೇರೆ. ಒಂದು ಕಾಲದಲ್ಲಿ ನೀವು ನಮ್ಮ ಆತ್ಮೀಯ ಸ್ನೇಹಿತರೇ ಆಗಿದ್ದೀರಿ. ನಿಮ್ಮ ಜೊತೆ ಕುಳಿತು ಊಟ ಮಾಡಿದ್ದೇನೆ. ಆದರೆ ಜೀವನದಲ್ಲಿ ನಿಮಗಿಂತ ಹೆಚ್ಚು ವಿಶ್ವಾಸ ನಾನು ಜನರಲ್ಲಿ ಉಳಿಸಿಕೊಂಡಿದ್ದೇನೆ. ಸಂಪತ್ತನ್ನು ಲೂಟಿ ಮಾಡಿ ಜೀವನ ನಡೆಸಲು ಬಂದಿಲ್ಲ. ನಿನ್ನೆ 20 ನಿಮಿಷ ಮಾತನಾಡಿದ್ದೀರಿ. ಆದರೆ ನಾನು ಹೆದರೊಲ್ಲ, ಜನರ ವಿಶ್ವಾಸದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಇಷ್ಟು ದಿನ ಸುಮ್ಮನಿದ್ದೆ, ಈಗ ಸುಮ್ಮನೆ ಇರುವುದಿಲ್ಲ. ನಾನು ಯುದ್ಧ ಸಾರುತ್ತೇನೆ. ನಾನು ಹೋರಾಟಕ್ಕೆ ಸಿದ್ಧ ಎಂದರು.

ಮಾಧ್ಯಮದವರನ್ನ ತೃಪ್ತಿಪಡಿಸಲು ನಾನು ಕೆಲಸ ಮಾಡುತ್ತಿಲ್ಲ. ನಾಡಿನ ಜನರ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದೇನೆ. ಮಾಧ್ಯಮಗಳಿಂದ ಎಷ್ಟು ಚಿತ್ರಹಿಂಸೆ ಅನುಭವಿಸಿದ್ದೇನೆ ಗೊತ್ತಿದೆ. ಈಗ ನಾನು ಎಲ್ಲದಕ್ಕೂ ಸಿದ್ಧವಾಗಿದ್ದು, ನಿಮ್ಮ ವಿರುದ್ಧ ನಾನು ಕಾನೂನು ಕ್ರಮ ಜರುಗಿಸುತ್ತೇನೆ. ನಿಮ್ಮ ಒಬ್ಬರಿಗೆ ಮಾತನಾಡಲು ಬರುವುದಿಲ್ಲ. ನನಗೂ ಮಾತನಾಡಲು ಬರುತ್ತದೆ. ಸುಮ್ಮನೆ ಆರೋಪ ಮಾಡುತ್ತೀರಾ? ಒಂದಾದರೂ ಒಳ್ಳೆ ಕೆಲಸ ಮಾಡಿದರ ಬಗ್ಗೆ ಮಾತಾಡಿಲ್ಲ ಎಂದು ಹೇಳಿ ಕಿಡಿಕಾರಿದರು.

CM HDK b

ಅಧಿಕಾರ ಶಾಶ್ವತ ಅಲ್ಲ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರು ಹೇಳಿದ್ದು, 1999 ನಾವು ಮೂರು ಜನ ಸೋತ್ತಿದ್ದು, ಮತ್ತೆ 5 ವರ್ಷದಲ್ಲಿ ಮತ್ತೆ ಅದೇ ಜನ ಗೆಲ್ಲಿಸಿದ್ದರು. ನಿಮ್ಮಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಹುಷಾರ್……. ನನ್ನ ಸುದ್ದಿಗೆ ಬರಬೇಡಿ. ನಿಮ್ಮ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ. ಹೆದರಿಕೊಂಡು ನಾನು ಹೋಗೊಲ್ಲ ಎಂದರು.

ಜೆಡಿಎಸ್ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಕಾರ್ಯಕ್ರಮದ ವೇದಿಕೆಯನ್ನು ಸಿಎಂ ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ಮಾಧ್ಯಮಗಳಿಗೆ ಧಮ್ಕಿ ಹಾಕುವ ಕಾರ್ಯಕ್ಕೆ ಸೀಮಿತ ಮಾಡಿದ್ದು ಇಂದಿನ ಜೆಡಿಎಸ್ ಕಾರ್ಯಕ್ರಮದ ವಿಶೇಷತೆಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *